×
Ad

ಬ್ರಹ್ಮರಕೂಟ್ಲು ಟೋಲ್ ಗೇಟ್ ದುಸ್ಥಿತಿ ಜನಪ್ರತಿನಿಧಿಗಳ ಬದ್ಧತೆ, ಇಚ್ಛಾಶಕ್ತಿಯ ಕೊರತೆಗೆ ಸಾಕ್ಷಿ: ರಮಾನಾಥ ರೈ

Update: 2021-03-09 13:28 IST

ಬಂಟ್ವಾಳ, ಮಾ.9: ಬ್ರಹ್ಮರಕೂಟ್ಲು ಟೋಲ್ ಗೇಟ್ ಇಡೀ ದೇಶದಲ್ಲಿಯೇ ಅವೈಜ್ಞಾನಿಕ ಮತ್ತು ಅಪಾಯಕಾರಿ ಸ್ಥಳದಲ್ಲಿದೆ. ಇದು ಈ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಯ ಬದ್ಧತೆ ಮತ್ತು ಇಚ್ಛಾಶಕ್ತಿಯ ಕೊರತೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಬ್ರಹ್ಮರಕೂಟ್ಲುವಿನಲ್ಲಿ ಅವಧಿ ಮೀರಿದ, ಅವೈಜ್ಞಾನಿಕ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ, ಟೋಲ್ ಸಂಗ್ರಹವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಇಂದು ಟೋಲ್ ಗೇಟ್ ಬಳಿ ನಡೆದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇಲ್ಲಿನ ಟೋಲ್ ಗೇಟ್ ನಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ. ಸರ್ವೀಸ್ ರಸ್ತೆಯೂ ಇಲ್ಲ. ಟೋಲ್ ಗೇಟ್ ಮುಗಿದಂತೆ ಕಿರಿದಾದ ರಸ್ತೆಯಿಂದ ವಾಹನ ಸವಾರರು ಅಪಾಯವನ್ನು ಎದುರಿಸುತ್ತಿದ್ದಾರೆ. ಇಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಅವೈಜ್ಞಾನಿಕ ಟೋಲ್ ಗೇಟ್ ನಿಂದಾಗಿ ಟ್ರಾಫಿಕ್ ವ್ಯವಸ್ಥೆಗೂ ನಿರಂತರ ಸಮಸ್ಯೆಯಾಗುತ್ತಿದೆ ಎಂದು ರೈ ಹೇಳಿದರು.

ಪೆಟ್ರೋಲ್, ಡೀಸೆಲ್‌, ಗ್ಯಾಸ್, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದರ ನಡುವೆ ಟೋಲ್ ಸಂಗ್ರಹದ ನೀತಿಯಲ್ಲಿ ಬದಲಾವಣೆಯ ಹೆಸರಿನಲ್ಲಿ ಕೇಂದ್ರ ಸರಕಾರ ಜನರ ಮೇಲೆ ಮತ್ತಷ್ಟು ಹೊರೆ ಹಾಕುತ್ತಿದೆ. ಈ ಮೂಲಕ ಕೇಂದ್ರ ಸರಕಾರ ಬಡವರ ಜೇಬಿಗೆ ಕೈಹಾಕಿ ಬಂಡವಾಳಶಾಹಿಗಳ ಜೇಬು ತುಂಬಿಸುತ್ತಿದೆ ಎಂದು ಆರೋಪಿಸಿದರು.

ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಸಂಚಾಲಕ ಪ್ರಭಾಕರ ದೈವಗುಡ್ಡೆ ಮಾತನಾಡಿ, ನಾಳೆಯಿಂದ ನಾವು ಟೋಲ್ ಪಾವತಿಸುವುದಿಲ್ಲ. ಹೊಸ ವಾಹನ ಖರೀದಿಸುವಾಗ ರಸ್ತೆ ತೆರಿಗೆ ಸಹಿತ ಎಲ್ಲಾ ತರದ ತೆರಿಗೆಯನ್ನು ಪಾವತಿಸಲಾಗುತ್ತದೆ. ಮತ್ತೆಯೂ ಸರಕಾರ ಜನರಿಂದ ಹಣ ಲೂಟಿ ಮಾಡುತ್ತಿದೆ. ಟೋಲ್ ಸಂಗ್ರಹದಲ್ಲಿ ದಿನಕ್ಕೊಂದು ನೀತಿ ತಂದು ಜನರು ರಸ್ತೆ ಇಳಿಯದ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ವಕೀಲ ಉಮೇಶ್ ಕುಮಾರ್ ಮಾತನಾಡಿ, ಬ್ರಹ್ಮರಕೂಟ್ಲು ಟೋಲ್ ಗೇಟ್ ಅವೈಜ್ಞಾನಿಕವಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿಂತಿಸಲಾಗುವುದು ಎಂದರು.

ಸಿಪಿಎಂ ನಾಯಕ ರಾಮಣ್ಣ ವಿಟ್ಲ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ರೈ, ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ವಕೀಲ ತುಳಸೀದಾಸ್, ಪ್ರಮುಖರಾದ ಇಬ್ರಾಹೀಂ ನವಾಝ್ ಬಡಕಬೈಲ್, ಮಧುಸೂದನ್, ಮೋಹನ್ ಗೌಡ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪದ್ಮನಾಭ ರೈ, ಹಾರೂನ್ ರಶೀದ್, ಅಲ್ತಾಫ್ ತುಂಬೆ, ಪ್ರವೀಣ್ ತುಂಬೆ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಮುಹಮ್ಮದ್ ವಲವೂರ್, ಸದಾಶಿವ ಬಂಗೇರ, ಮುಹಮ್ಮದ್ ನಂದಾವರ, ಲೋಲಾಕ್ಷ ಶೆಟ್ಟಿ, ವಾಸು ಪೂಜಾರಿ, ವೆಂಕಪ್ಪ ಪೂಜಾರಿ, ಬಿ.ಶೇಖರ್, ಸುರೇಶ್ ಕುಮಾರ್, ಪ್ರಶಾಂತ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News