×
Ad

ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ನಿಯಾಝ್ ಪಣಕಜೆಗೆ ಸನ್ಮಾನ

Update: 2021-03-09 13:52 IST

ಮಂಗಳೂರು, ಮಾ.9: ಕೂಲಿ, ಮನೆ ಕೆಲಸ ಮಾಡಿಕೊಂಡೇ ಶಿಕ್ಷಣ ಕಲಿತು ಉಪನ್ಯಾಸಕನಾಗಿ, ಪಿಎಚ್‌ಡಿ ಪದವಿಯನ್ನೂ ಪಡೆದು ಅಸಾಮಾನ್ಯ ಸಾಧನೆಗೈದ ನಿಯಾಝ್ ಪಣಕಜೆ ಅವರನ್ನು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಮಂಗಳವಾರ ಕುದ್ರೋಳಿಯ ಬೈತುಸ್ಸಫಾದಲ್ಲಿ ಸನ್ಮಾನಿಸಲಾಯಿತು.

ಅಭಿನಂದಿಸಿ ಮಾತನಾಡಿದ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಎಳೆಯ ಪ್ರಾಯದಲ್ಲೇ ಕೂಲಿ ಮತ್ತು ಮನೆಗೆಲಸ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಉಪನ್ಯಾಸಕನಾಗಿ, ಪಿಎಚ್‌ಡಿ ಪದವಿಯನ್ನು ಪಡೆದ ನಿಯಾಝ್ ಪಣಕಜೆಯವರ ಸಾಧನೆ ಸಣ್ಣದಲ್ಲ. ಮಾಧ್ಯಮಗಳಲ್ಲಿ ವರದಿ ಪ್ರಕಟವಾದೊಡನೆ ನಾನು ಆಶ್ಚರ್ಯಚಕಿತನಾದೆ. ಗ್ರಾಮಾಂತರ ಪ್ರದೇಶದಲ್ಲಿದ್ದುಕೊಂಡು ಸಮಾಜಕ್ಕೆ ಮಾದರಿಯಾದ ನಿಯಾಝ್ ಪಣಕಜೆಯವರನ್ನು ಅಭಿನಂದಿಸಬೇಕು ಎಂದು ಆ ಕ್ಷಣ ತೀರ್ಮಾನಿಸಿದೆ. ಇಂದು ಆ ಕರ್ತವ್ಯ ನೆರವೇರಿಸಿದ ತೃಪ್ತಿ ನನಗಿದೆ. ನಿಯಾಝ್ ಪಣಕಜೆ ಇನ್ನಷ್ಟು ಎತ್ತರಕ್ಕೆ ಏರಲಿ ಮತ್ತು ಸಮಾಜ ಹಾಗೂ ಸಮುದಾಯ ಮೆಚ್ಚುವಂತಹ ಕೆಲಸ ಮಾಡಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಯಾಝ್ ಪಣಕಜೆ, ಬಾಲ್ಯದಲ್ಲೇ ನಾನೊಂದು ಗುರಿ ಹಾಕಿಕೊಂಡಿದ್ದೆ. ಅದನ್ನು ಈಡೇರಿಸಿದ ಸಂತೋಷ ನನಗಿದೆ. ಆದರೆ ಪಿಎಚ್‌ಡಿ ಪದವಿ ಪಡೆದನೆಂಬ ಅಹಂಕಾರ ನನಗಿಲ್ಲ. ನನ್ನ ಮಾರ್ಗದರ್ಶಕರು, ಗುರುಗಳ ನೆರವನ್ನು ಸದಾ ಸ್ಮರಿಸುವೆ. ಪಿಯುಸಿಯಲ್ಲಿರುವಾಗ ಸೆಂಟ್ರಲ್ ಕಮಿಟಿಯವರು ದಾನವಾಗಿ ನೀಡಿದ ಪುಸ್ತಕಗಳನ್ನು ಓದಿದ್ದು ನನಗೀಗಲೂ ನೆನಪಿದೆ. ಈಗಲೂ ಅಷ್ಟೆ, ಉಪನ್ಯಾಸಕನಾಗಿದ್ದರೂ ಬಿಡುವಿದ್ದಾಗ ಯಾವುದೇ ಕೂಲಿ ಕೆಲಸ ಮಾಡಲು ನಾನು ಹಿಂಜರಿಯುವುದಿಲ್ಲ. ಆ ಬಗ್ಗೆ ಕೀಳರಿಮೆಯೂ ನನಗಿಲ್ಲ. ನನ್ನ ಕಲಿಕೆ-ಅಧ್ಯಯನವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಮಸೀದಿ-ಮದ್ರಸಗಳನ್ನು ಆಧುನಿಕ ಶೈಕ್ಷಣಿಕ ಕೇಂದ್ರಗಳಾಗಿ ಹೇಗೆ ಮಾರ್ಪಡಿಸಬಹುದು? ಇದರಲ್ಲಿ ಮಸೀದಿಯ ಅಧ್ಯಕ್ಷ, ಪದಾಧಿಕಾರಿಗಳ ಪಾತ್ರ ಏನು? ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು ಎಂದು ನಿರ್ಧರಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಸಿ.ಮಹ್ಮೂದ್ ಯಾನೆ ಪುತ್ತುಬಾವ ಹಾಜಿ, ಡಾ.ಆರಿಫ್ ಮಸೂದ್, ಖಲೀಲ್ ಅಹ್ಮದ್, ಡಿ.ಎಂ.ಅಸ್ಲಂ, ಅಬೂಬಕರ್ ಕುದ್ರೋಳಿ, ಐ.ಮೊಯ್ದಿನಬ್ಬ ಹಾಜಿ, ಸಿತಾರ್ ಮಜೀದ್ ಹಾಜಿ, ಅಹ್ಮದ್ ಬಾವಾ ಬಜಾಲ್, ಎಂಎ ಅಶ್ರಫ್ ಬಂದರ್, ಸಿಎಂ ಹನೀಫ್, ಎನ್‌.ಕೆ.ಅಬೂಬಕರ್, ಆಬಿದ್ ಜಲೀಲ್, ಪಿ.ಪಿ.ಮಜೀದ್ ಕುದ್ರೋಳಿ ಮತ್ತಿತರರು ಪಾಲ್ಗೊಂಡಿದ್ದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ವಂದಿಸಿದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News