'ಜೈಶ್ರೀರಾಮ್' ಘೋಷಣೆಗೆ ತಡೆ ಹೇರಲು ಕೋರಿ ಸಲ್ಲಿಸಿರುವ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ,ಮಾ.9: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆಯನ್ನು ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಮತ್ತು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಮತ್ತು ಅದರ ನಾಯಕರು ‘ಜೈ ಶ್ರೀರಾಮ್’ ಘೋಷಣೆಯನ್ನು ಬಳಸುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.
ಪ.ಬಂಗಾಳದಲ್ಲಿ ಮಾತ್ರ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವುದು ಸಂವಿಧಾನದ ವಿಧಿ 14ರಡಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರಾದ ನ್ಯಾಯವಾದಿ ಎಂ.ಎಲ್.ಶರ್ಮಾ ವಾದಿಸಿದ್ದರು. ತನ್ನಿಚ್ಛೆಯಂತೆ ಐದು ರಾಜ್ಯಗಳನ್ನು ಅಸಮಾನವಾಗಿ ನಡೆಸಿಕೊಳ್ಳುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುವ ಯಾವುದೇ ಕಾನೂನು ಇನ್ನೂ ಅಸಿತ್ವದಲ್ಲಿಲ್ಲ. ಇತರ ರಾಜ್ಯಗಳಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆಸುವಾಗ ಯಾವುದೇ ಭಯೋತ್ಪಾದಕ ದಾಳಿಯ ಭೀತಿಯಲ್ಲಿಲ್ಲದ ಮತ್ತು ವಿವಾದಿತ ಯುದ್ಧ ವಲಯದಡಿ ಇಲ್ಲದಿರುವ ಪ.ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆಯನ್ನು ನಡೆಸುವುದು ಸಂವಿಧಾನದ ವಿಧಿ 14ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಶರ್ಮಾ ತನ್ನ ಅರ್ಜಿಯಲ್ಲಿ ಹೇಳಿದ್ದರು.
ಪ.ಬಂಗಾಳದಲ್ಲಿ ಮಾ.27ರಿಂದ ಎ.29ರವರೆಗೆ ಎಂಟು ಹಂತಗಳಲ್ಲಿ,ಕೇರಳ,ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಎ.6ರಂದು ಒಂದೇ ಹಂತದಲ್ಲಿ ಮತ್ತು ಅಸ್ಸಾಮ್‌ನಲ್ಲಿ ಮಾ.27 ಮತ್ತು ಎ.6ರ ನಡುವೆ ಮೂರು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಆಯೋಗವು ಪ್ರಕಟಿಸಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಜೈ ಶ್ರೀರಾಮ್’ ಘೋಷಣೆಯ ಬಳಕೆಯನ್ನೂ ತನ್ನ ಅರ್ಜಿಯಲ್ಲಿ ಆಕ್ಷೇಪಿಸಿದ್ದ ಶರ್ಮಾ,ಈ ಪ್ರಕರಣದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಪ.ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡುವಂತೆ ಕೋರಿದ್ದರು.
ಜಾತ್ಯತೀತ ವಾದವು ಸಂವಿಧಾನದ ಬದಲಿಸಲು ಸಾಧ್ಯವಿಲ್ಲದ ಮೂಲ ಸ್ವರೂಪವಾಗಿದೆ. ಧಾರ್ಮಿಕವಾಗಿ ಪ್ರಚೋದಕ ಘೋಷಣೆ ‘ಜೈ ಶ್ರೀರಾಮ್’ ಭಾರತದ ಪ್ರಜೆಗಳ ನಡುವೆ ಕೋಮು ಅಸಾಮರಸ್ಯ ಮತ್ತು ದ್ವೇಷವನ್ನು ಹುಟ್ಟುಹಾಕುತ್ತಿದೆ ಎಂದು ಬೆಟ್ಟು ಮಾಡಿದ್ದ ಶರ್ಮಾ,ಘೋಷಣೆಯ ಬಳಕೆಯು ಜನ ಪ್ರಾತಿನಿಧ್ಯ ಕಾಯ್ದೆಯ 123 ಮತ್ತು 125 ಕಲಮ್‌ಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು.
ಶರ್ಮಾರ ವಾದಗಳನ್ನು ತಳ್ಳಿಹಾಕಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಅರ್ಜಿಯನ್ನು ವಜಾಗೊಳಿಸಿತಲ್ಲದೆ,ಈ ಸಂಬಂಧ ಉಚ್ಚ ನ್ಯಾಯಾಲಯ ಅಥವಾ ಚುನಾವಣಾ ಆಯೋಗವನ್ನು ಸಂಪರ್ಕಿಸುವಂತೆ ಅವರಿಗೆ ಸೂಚಿಸಿತು.