×
Ad

ಐಟಿ ಕಾಯಿದೆಯನ್ವಯ ಕೇಂದ್ರದ ಹೊಸ ನಿಯಮಗಳನ್ನು ಪ್ರಶ್ನಿಸಿ ʼದಿ ವೈರ್ʼ ಸಂಸ್ಥೆಯಿಂದ ದಿಲ್ಲಿ ಹೈಕೋರ್ಟ್‍ಗೆ ಅರ್ಜಿ

Update: 2021-03-09 15:19 IST

ಹೊಸದಿಲ್ಲಿ: ಡಿಜಿಟಲ್ ಸುದ್ದಿ ಮಾಧ್ಯಮಗಳನ್ನು ಹಾಗೂ ಒಟಿಟಿ ಪ್ಲಾಟ್‍ ಫಾರ್ಮ್‍ಗಳನ್ನು ನಿಯಂತ್ರಿಸುವ ಉದ್ದೇಶದಿಂದ ಐಟಿ ಕಾಯಿದೆಯನ್ವಯ ಕೇಂದ್ರ ಸರಕಾರ ಹೊರತಂದಿರುವ ಹೊಸ ನಿಯಮಗಳನ್ನು ಪ್ರಶ್ನಿಸಿ ʼದಿ ವೈರ್ʼ  ಸುದ್ದಿ ಸಂಸ್ಥೆಯನ್ನು ನಡೆಸುವ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.  ಈ ಕುರಿತಂತೆ ಎಪ್ರಿಲ್ 16ರಂದು ವಿಸ್ತೃತ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ದಿ ವೈರ್ ನ ಸ್ಥಾಪಕ ಸಂಪಾದಕ ಎಂ.ಕೆ ವೇಣು ಹಾಗೂ ʼದಿ ನ್ಯೂಸ್ ಮಿನಿಟ್ʼ ಸ್ಥಾಪಕಿ ಮತ್ತು ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್ ಕೂಡ ಈ ಪ್ರಕರಣದಲ್ಲಿ ಅರ್ಜಿದಾರರಾಗಿದ್ದಾರೆ. ಮುಂದಿನ ವಿಚಾರಣೆ ತನಕ ತಮಗೆ ಈ ಹೊಸ ನಿಯಮಗಳನ್ವಯ ಸಂಭಾವ್ಯ ಬಲವಂತದ ಕ್ರಮಗಳಿಂದ ರಕ್ಷಣೆಯೊದಗಿಸಬೇಕೆಂದೂ ಈ ಅರ್ಜಿಯಲ್ಲಿ ಕೋರಲಾಗಿದೆ.

ಬಲವಂತದ  ಕ್ರಮವನ್ನೇನಾದರೂ ಈತನ್ಮಧ್ಯೆ ಕೈಗೊಂಡಲ್ಲಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಹಾಗೂ ಜಸ್ಟಿಸ್ ಜಸ್ಮೀತ್ ಸಿಂಗ್ ಅವರ ಪೀಠ ಹೇಳಿದೆ.

ಈ ಅಪೀಲು ಹೊಸ  ನಿಯಮಗಳು ಹಾಗೂ ಅವುಗಳು ಡಿಜಿಟಲ್ ಸುದ್ದಿ ಸಂಸ್ಥೆಗಳ ಮೇಲೆ ಬೀರುವ ಪರಿಣಾಮಗಳನ್ನು ಪ್ರಶ್ನಿಸಿದೆಯೇ ಹೊರತು ಒಟಿಟಿ  ಮತ್ತಿತರ ಮಾಧ್ಯಮಗಳ ನಿಯಂತ್ರಣವನ್ನು ಪ್ರಶ್ನಿಸಿಲ್ಲ ಎಂದು  ಅಪೀಲುದಾರರ ಪರ ವಕೀಲರಾದ ನಿತ್ಯಾ ರಾಮಕೃಷ್ಣನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News