×
Ad

ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ

Update: 2021-03-09 16:40 IST

ಹೊಸದಿಲ್ಲಿ: ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮೊದಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾವತ್ ಸೋಮವಾರ ಬಿಜೆಪಿ ಹೈಕಮಾಂಡನ್ನು ಭೇಟಿಯಾಗಿ ಚರ್ಚಿಸಿದ್ದರು.

60ರ ವಯಸ್ಸಿನ ರಾವತ್ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರಿಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.

ರಾವತ್ ಸಂಪುಟದಲ್ಲಿರುವ ಸಚಿವ ಧನ್ ಸಿಂಗ್ ರಾವತ್ ಅವರು ರಾವತ್ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದಾರೆ.  ಸದ್ಯ ಗರ್ವಾಲ್ ನಲ್ಲಿರುವ ರಾವತ್ ಮಧ್ಯಾಹ್ನದ ವೇಳೆ ರಾಜ್ಯ ರಾಜಧಾನಿ ಡೆಹ್ರಾಡೂನ್ ಗೆ ಖಾಸಗಿ ವಿಮಾನದಲ್ಲಿ ಧಾವಿಸಿದ್ದಾರೆ ಎಂಬ ಊಹಾಪೋಹ ಕೇಳಿಬಂದಿದೆ.

ರಾವತ್ ಅವರು ರಾಜೀನಾಮೆಗೆ ಮೊದಲು ದಿಲ್ಲಿಯ ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದರು. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೆ ಮೊದಲು ‘ಕಳಪೆ ನಿರ್ವಹಣೆ’ ತೋರಿದ್ದಕ್ಕೆ ಹಾಗೂ ಕೆಲವು ಬಿಜೆಪಿ ಶಾಸಕರು ಸಿಎಂ ಕಾರ್ಯವೈಖರಿಯ ಕುರಿತಾಗಿ ‘ಅಸಮಧಾನ’ ತೋರಿದ್ದ ಹಿನ್ನೆಲೆಯಲ್ಲಿ ರಾವತ್ ರಿಂದ ಬಿಜೆಪಿ ರಾಜೀನಾಮೆ ಪಡೆದುಕೊಂಡಿದೆ.

“ನಾಲ್ಕು ವರ್ಷಗಳ ಕಾಲ ಸಿಎಂ ಆಗಿ ಕೆಲಸ ಮಾಡುವ ಸುವರ್ಣಾವಕಾಶವನ್ನು ಬಿಜೆಪಿ ನನಗೆ ನೀಡಿತ್ತು. ನಾನೊಂದು ಚಿಕ್ಕ ಗ್ರಾಮದಲ್ಲಿ ಜನಿಸಿದ್ದೆ. ಬಿಜೆಪಿ ಪಕ್ಷ ಮಾತ್ರ ಸಾಧಾರಣ ಕುಟುಂಬದಿಂದ ಬಂದವರಿಗೆ ಅವಕಾಶ ನೀಡುತ್ತದೆ. ಇದೊಂದು ಒಮ್ಮತದ ನಿರ್ಧಾರವಾಗಿತ್ತು. ನಾನು ಸಿಎಂ ಹುದ್ದೆಯನ್ನು ಹಸ್ತಾಂತರಿಸಲು ಸಿದ್ದನಿದ್ದೇನೆ. ಸೇವೆ ಮಾಡಲು ಅವಕಾಶ ನೀಡಿರುವ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುವೆ'' ಎಂದು ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News