"ಕೋಮುವಾದವನ್ನು ಪ್ರೋತ್ಸಾಹಿಸಲು ಏನು ಮಾಡಲೂ ಸಿದ್ಧವಿರುವ ಅಮಿತ್‌ ಶಾ ನಮಗೆ ಜಾತ್ಯತೀತತೆ ಕಲಿಸಲು ಬಂದಿದ್ದಾರೆ"

Update: 2021-03-09 11:26 GMT

ತಿರುವನಂತಪುರಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ʼಕೋಮುವಾದ ಮೂರ್ತವೆತ್ತಂತಿದ್ದಾರೆ' ಹಾಗೂ ಅಪಹರಣ, ನಕಲಿ ಎನ್‍ಕೌಂಟರ್ ಮುಂತಾದ  ಆರೋಪಗಳನ್ನು ಹೊತ್ತು ಜೈಲು ಶಿಕ್ಷೆ ಅನುಭವಿಸಿದವರು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.

ಚಿನ್ನ ಮತ್ತು ಡಾಲರ್ ಸ್ಮಗ್ಲಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಣರಾಯಿ ಅವರತ್ತ  ಪ್ರಶ್ನೆಗಳ ಸುರಿಮಳೆಯನ್ನು ಅಮಿತ್ ಶಾ ಹರಿಸಿದ ನಂತರ ಸಿಎಂರಿಂದ ಈ ತೀಕ್ಷ್ಣ ವಾಗ್ದಾಳಿ ನಡೆದಿದೆ. ನಕಲಿ ಎನ್‍ ಕೌಂಟರ್ ಮತ್ತು ಅಪಹರಣ ಪ್ರಕರಣಗಳ ಚಾರ್ಜ್ ಶೀಟ್‍ನಲ್ಲಿ ಯಾರ ಹೆಸರು ಉಲ್ಲೇಖಗೊಂಡಿದೆ ಎಂದು ಕೇರಳ ಸಿಎಂ ಕೇಂದ್ರ ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ.

"ಅಮಿತ್ ಶಾ ಅವರು ಕೋಮುವಾದವೇ ಮೂರ್ತವೆತ್ತಂತಿದ್ದಾರೆ. ಕೋಮುವಾದ ಪ್ರೋತ್ಸಾಹಿಸಲು ಅವರು ಏನು ಬೇಕಾದರೂ ಮಾಡುತ್ತಾರೆ. ಅವರು ಕೇಂದ್ರ ಸಚಿವರಾದರೂ ಹೆಚ್ಚು ಬದಲಾಗಿಲ್ಲ. ಕೋಮುವಾದವನ್ನು ಪ್ರೋತ್ಸಾಹಿಸುವ ಆರೆಸ್ಸೆಸ್ ನಾಯಕ ನಮಗೆ ಜಾತ್ಯತೀತತೆ ಬಗ್ಗೆ ಕಲಿಸಲು ಇಲ್ಲಿಗೆ ಬಂದಿದ್ದಾರೆ" ಎಂದು ವಿಜಯನ್ ಹೇಳಿದರು.

"ಅವರು ನಿನ್ನೆ ನನಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ  ಅಪಹರಣಕ್ಕಾಗಿ ಜೈಲುಪಾಲಾದವನು ನಾನಲ್ಲ ಎಂದು ನಾನು ಅವರಿಗೆ ನೆನಪಿಸಬಯಸುತ್ತೇನೆ.  ನಕಲಿ ಎನ್‍ಕೌಂಟರ್ ಪ್ರಕರಣವೊಂದರ ಚಾರ್ಜ್ ಶೀಟ್‍ನಲ್ಲಿ ಯಾರ ಹೆಸರು ಉಲ್ಲೇಖಗೊಂಡಿತ್ತು? ಯಾರನ್ನು ಬಂಧಿಸಲಾಗಿತ್ತು ಹಾಗೂ ಯಾರು ಜೈಲುಪಾಲಾಗಿದ್ದು ಎಂದು ಅಮಿತ್ ಶಾ ಅವರಿಗೆ ನೆನಪಿದೆಯೇ? ಅದೇ ವ್ಯಕ್ತಿ ಕೊಲೆ, ಅಪಹರಣ, ಬಲವಂತದ ವಸೂಲಿ ಹಾಗೂ ಅಕ್ರಮ  ಗೂಢಚರ್ಯೆ ನಡೆಸಿದ ಆರೋಪ ಎದುರಿಸಿದ್ದರು" ಎಂದು ಧರ್ಮಡಂ ಎಂಬಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಪಿಣರಾಯಿ ಹೇಳಿದರು.

ಸೊಹ್ರಾಬುದ್ದೀನ್ ಶೇಖ್,  ಆತನ ಪತ್ನಿ ಕೌಸರ್ ಬೀ ಹಾಗೂ ತುಳಸೀರಾಂ ಪ್ರಜಾಪತಿ ಪ್ರಕರಣಗಳನ್ನು ಉಲ್ಲೇಖಿಸಿದ ಪಿಣರಾಯಿ "ಎಲ್ಲವೂ ನಕಲಿ ಎನ್‍ಕೌಂಟರ್ ಪ್ರಕರಣಗಳಾಗಿದ್ದವು. ಈ ಎಲ್ಲಾ ಅಪರಾಧಗಳಿಗೆ ಸಂಬಂಧಿಸಿದಂತೆ ಯಾರ ವಿರುದ್ಧ ಪ್ರಕರಣ ದಾಖಲಾಗಿತ್ತು? ಆ ಹೆಸರು ಅಮಿತ್ ಶಾ," ಎಂದು ಹೇಳಿದ ಪಿಣರಾಯಿ  ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿ ಎಚ್ ಲೋಯಾ ಶಂಕಾಸ್ಪದ ಸಾವು ಪ್ರಕರಣ  ಉಲ್ಲೇಖಿಸಿ ಯಾವ ಬಿಜೆಪಿ ನಾಯಕ ಈ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.

"ನಮಗೆಲ್ಲರಿಗೂ 2013ರ ಅಕ್ರಮ ಗೂಢಚರ್ಯೆ ಪ್ರಕರಣದ ಕುರಿತು ತಿಳಿದಿದೆ. ನಂತರ ದೂರುದಾರ ಮಹಿಳೆ ದೂರು ಕೈಬಿಟ್ಟರು. ಈ ಪ್ರಕರಣದಲ್ಲಿ ಯಾರು ಜೈಲಿನಲ್ಲಿದ್ದರು? ನೀವು  ಹೊಂದಿರುವ ಹುದ್ದೆಗೆ ತಕ್ಕಂತೆ ನೀವು ವರ್ತಿಸದೇ ಇದ್ದರೆ ನಿಮ್ಮ ತಪ್ಪುಗಳನ್ನು ಪಟ್ಟಿ ಮಾಡುವುದು ನಮಗೆ ಅನಿವಾರ್ಯ" ಎಂದು ಪಿಣರಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News