ನಾನು ಹೊರಗಿನವಳು ಎಂದು ಹೇಳಲು ನಿಮಗೆಷ್ಟು ಧೈರ್ಯ: ಬಿಜೆಪಿ ವಿರುದ್ಧ ಮಮತಾ ಸಿಡಿಮಿಡಿ

Update: 2021-03-09 12:17 GMT

ಕೋಲ್ಕತಾ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿರುವ ನಂದಿಗ್ರಾಮದಲ್ಲಿ ನೆರೆದಿದ್ದ ಜನತೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ  ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಧರ್ಮದೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದರಲ್ಲದೆ ದುರ್ಗಾ ಮಂತ್ರವನ್ನು ವೇದಿಕೆಯಲ್ಲೇ ಪಠಿಸಿದರು. ತನ್ನನ್ನು ಹೊರಗಿನವಳು ಎಂದು ಹೇಳುತ್ತಿರುವ ಬಿಜೆಪಿಗೆ ತಿರುಗೇಟನ್ನೂ ನೀಡಿದರು.

ಬಿಜೆಪಿ ಬಂಗಾಳ ರಾಜ್ಯವನ್ನು ವಿಭಜಿಸುತ್ತಿದೆ. ಆ ಪಕ್ಷದವರು ನನ್ನನ್ನು ಹೊರಗಿನವಳು ಎಂದು ಕರೆಯುತ್ತಿದ್ದಾರೆ. ನಾನು ಹೊರಗಿನವಳಾಗಿದ್ದರೆ ಹೇಗೆ ಮುಖ್ಯಮಂತ್ರಿಯಾಗುತ್ತಿದ್ದೆ? ನಂದಿಗ್ರಾಮ ನನಗೆ ಪ್ರಿಯವಾದ ಸ್ಥಳ.ಈ ಪ್ರದೇಶವು ಗುಂಡುಗಳು ಹಾಗೂ ಬಾಂಬುಗಳನ್ನು ತಡೆದುಕೊಂಡಿತ್ತು ಎಂದರು.

“ನಾನು ನಾಮಪತ್ರ ಸಲ್ಲಿಸುವುದು ನಿಮಗಿಷ್ಟವಿಲ್ಲದಿದ್ದರೆ, ನಾನು ನಾಮಪತ್ರ ಸಲ್ಲಿಸುವುದಿಲ್ಲ. ನೀವು ನನ್ನನ್ನು ನಿಮ್ಮ ಮಗಳೆಂದು ಭಾವಿಸಿದರೆ ಮಾತ್ರ ನಾನು ಮುಂದುವರಿದು ನನ್ನ ನಾಮಪತ್ರವನ್ನು ಸಲ್ಲಿಸುವೆ’’ಎಂದು ನಂದಿಗ್ರಾಮದ ಜನತೆಯನ್ನು ಉದ್ದೇಶಿಸಿ ಮಮತಾ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಟಿಎಂಸಿ ನಾಯಕ, ಈಗ ಬಿಜೆಪಿಗೆ ಪಕ್ಷಾಂತರವಾಗಿರುವ ಸುವೇಂದು ಅಧಿಕಾರಿಯವರನ್ನು ಎದುರಿಸಲಿದ್ದಾರೆ. ನಂದಿಗ್ರಾಮದಲ್ಲಿ ತನ್ನನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ ಬಳಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಧಿಕಾರಿ, "ನಾನು ನಂದಿಗ್ರಾಮದ ಪುತ್ರ. ನನ್ನ ಎದುರು ಸ್ಪರ್ಧಿಸುತ್ತಿರುವವರು ಹೊರಗಿನವರು. ಅವರು ಇಲ್ಲಿ ಅತಿಥಿ ಮಾತ್ರ. ಪ್ರತಿ 5 ವರ್ಷಕ್ಕೊಮ್ಮೆ ಅವರಿಗೆ ನಂದಿಗ್ರಾಮದ ನೆನಪಾಗುತ್ತದೆ. ನಾನು ಮಮತಾ ಬ್ಯಾನರ್ಜಿ ವಿರುದ್ಧ 50,000 ಮತಗಳಿಂದ ಜಯ ಸಾಧಿಸುವುದು ಶತಸಿದ್ದ'' ಎಂದು ಪುನರುಚ್ಚರಿಸಿದ್ದರು.

ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಮಂಗಳವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಉದ್ಯೋಗ ಹಾಗೂ ಜನಪರ ಯೋಜನೆಗಳತ್ತ ಹೆಚ್ಚು ಗಮನ ನೀಡಲಾಗಿದೆ. ಮಮತಾ ಅವರು ನಂದಿಗ್ರಾಮಕ್ಕೆ ಭೇಟಿ ನೀಡಿ ಬುಧವಾರ ತನ್ನ ನಾಮಪತ್ರವನ್ನು ಸಲ್ಲಿಸುವ ಸಾಧ್ಯತೆಯಿದೆ. ಸುವೇಂದು ಅಧಿಕಾರಿ ಮಾ.12ರಂದು ಬಿಜೆಪಿಯ ಪ್ರಮುಖ ನಾಯಕರು ಹಾಗೂ ತನ್ನ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News