ಮಾ. 22ರಂದು ರೈತರಿಂದ ವಿಧಾನಸೌಧ ಚಲೋ: ದ.ಕ.ಜಿಲ್ಲೆಯಿಂದ 1000 ಮಂದಿ ಭಾಗಿ ನಿರೀಕ್ಷೆ
ಮಂಗಳೂರು, ಮಾ. 9: ರೈತ ಹಾಗೂ ಕಾರ್ಮಿಕ ವಿರೋಧಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ರದ್ಧತಿಗಾಗಿ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ನೇತೃತ್ವದಲ್ಲಿ ಮಾ. 22ರಂದು ನಡೆಯಲಿರುವ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯಿಂದ 1000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಂದು ಬೆಂಗಳೂರು ಸಿಟಿರೈಲ್ವೇ ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ವಿಧಾನಸೌಧ ಚಲೋ ಆರಂಭಗೊಳ್ಳಲಿದ್ದು, ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಹಾಗೂ ಮಹಿಳೆಯರನ್ನು ಒಳಗೊಂಡ 40ಕ್ಕೂ ಅಧಿಕ ಸಂಘಟನೆಗಳ 50000ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಸರಕಾರದ ಕೃಷಿ ಕಾಯ್ದೆ ತಿದ್ದುಪಡಿ ಕೃಷಿ ಸಂಸ್ಕೃತಿಯನ್ನು ನಾಶ ಮಾಡುವುದಷ್ಟೇ ಅಲ್ಲದೆ, ದೇಶದ ಕೃಷಿ ಮಾರುಕಟ್ಟೆ, ಸಂಶೋಧನೆ ಹಾಗೂ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಹುನ್ನಾರ. ಜತೆಗೆ ಪಡಿತರ ಮೂಲಕ ಆಹಾರ ಭದ್ರತೆಗೂ ಧಕ್ಕೆ ಆಗಲಿದೆ ಎಂದು ಅವರು ಹೇಳಿದರು.
'ಕನಿಷ್ಠ ಬೆಂಬಲ ಎಲ್ಲಿದೆ ಕೊಡಿಸಿ'
ಪ್ರಧಾನಿ ನರೇಂದ್ರ ಮೋದಿಯವರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಇತ್ತು, ಇದೆ ಮುಂದೆಯೂ ಇರುತ್ತದೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ವಾಸ್ತವವಾಗಿ ಕೇಂದ್ರ ಸರಕಾರ ಘೋಷಿಸಿರುವ ಎಂಎಸ್‌ಪಿಗಿಂತಲೂ ಕಡಿಮೆ ದರಕ್ಕೆ ದೇಶಾದ್ಯಂತ ಕೃಷಿ ಉತ್ಪನ್ನಗಳು ಮಾರಾಟವಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಕಳೆದ ವರ್ಷದಲ್ಲಿ ಕೇವಲ 13 ಬೆಳೆಗಳಿಗೆ ಹೋಲಿಸಿದರೆ 3 ಸಾವಿರ ಕೋಟಿ ರೂ. ನಷ್ಟವನ್ನು ರೈತರು ಅನುಭನವಿಸಿ ದ್ದಾರೆ. ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿರುವ ಬೆಲೆಗೆ ಹೋಲಿಸಿದರೆ ಈ ನಷ್ಟ 20 ಸಾವಿರ ಕೋಟಿಗೂ ಅಧಿಕ ಎಂದು ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರ ವರದಿಯನ್ನು ಉಲ್ಲೇಖಿಸಿ ಬಡಗಲಪುರ ನಾಗೇಂದ್ರ ವಿವರಿಸಿದರು.
ರಾಜ್ಯದ ಬಜೆಟ್ ಕೃಷಿ ಮತ್ತು ಕೃಷಿಕರ ಇಲ್ಲದ, ನೋಡಲು ಅಂದ ಚೆಂದವಾಗಿರುವ ಒಳಗೆ ಟೊಳ್ಳಾಗಿರುವ ಬಜೆಟ್ ಎಂದು ಅವರು ವಿಶ್ಲೇಷಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಜಿಲ್ಲೆಯಲ್ಲಿ ಅಡಿಕೆ ಹಳದಿ ರೋಗಕ್ಕೆ ಮೀಸಲಿಟ್ಟಿರುವ 25 ಕೋಟಿ ರೂ.ಗಳನ್ನು ಅಡಿಕೆ ಬೆಳೆಗಾರರ ಸಾಲಮನ್ನಾಕ್ಕೆ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಯಾದವ ಶೆಟ್ಟಿ, ಶಾಂತರಾಮ್, ಕೃಷ್ಣಪ್ಪ ಸಾಲ್ಯಾನ್, ರಘು ಎಕ್ಕಾರು, ಓಸ್ವಾಲ್ಡ್ ಫೆರ್ನಾಂಡಿಸ್, ಪ್ರೇಮನಾಥ್, ರಾಮಣ್ಣ, ವಾಸುದೇವ ಉಚ್ಚಿಲ್ ಉಪಸ್ಥಿತರಿದ್ದರು.
'ಸಾವಯವ ಹೆಸರಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರಿಗೆ ಗೌರವಧನ'
ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಕಳೆದ ಸಾಲಿಗಿಂತ 600 ಕೋಟಿ ರೂ. ಕಡಿತ ಮಾಡಲಾಗಿದೆ. ಆವರ್ತ ನಿಧಿಗಾಗಿ ಒಂದು ಪೈಸೆಯನ್ನೂ ಮೀಸಲಿಟ್ಟಿಲ್ಲ. ಸಾವಯವ ಹೆಸರಿನಲ್ಲಿ ಇಟ್ಟಿರುವ 500 ಕೋಟಿ ರೂ.ಗಳು ಸಂಘ ಪರಿವಾರದ ಕಾರ್ಯಕರ್ತರಿಗೆ ಸಾವಯವ ಹೆಸರಿನಲ್ಲಿ ಗೌರವಧನ ಪಾವತಿಸುವ ಯೋಜನೆಯಾಗಿದೆ ಎಂದು ಬಡಗಲಪುರ ನಾಗೇಂದ್ರ ಆರೋಪಿಸಿದರು.