ನನೆಗುದಿಗೆ ಬಿದ್ದ ಸಸಿಹಿತ್ಲು ಬೀಚ್ ಅಭಿವೃದ್ಧಿ: ಅಭಯಚಂದ್ರ ಜೈನ್
ಮಂಗಳೂರು, ಮಾ.9: ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಉತ್ಸವದ ಮೂಲಕ ಗಮನ ಸೆಳೆದಿದ್ದ ಜಿಲ್ಲೆಯ ಶಾಂತ ಬೀಚ್ ಎಂದೇ ಕರೆಯಲ್ಪಡುವ ಸಸಿಹಿತ್ಲು ಬೀಚ್ ಅಭಿವೃದ್ಧಿ ಮತ್ತೆ ನನೆಗುದಿಗೆ ಬಿದ್ದಿದೆ. ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಈ ಬೀಚ್ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶದ ಭರವಸೆಯನ್ನೂ ಕಲ್ಪಿಸಿತ್ತಾದರೂ ಪ್ರಸಕ್ತ ಜಿಲ್ಲಾಡಳಿತದ ನಿರ್ಲಕ್ಷದಿಂದಾಗಿ ಕಳೆಗುಂದಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ತಂಡದ ಜತೆ ಇಂದು ಸಸಿಹಿತ್ಲು ಬೀಚ್ ಬಳಿಗೆ ಭೇಟಿ ನೀಡಿದ ಮಾತನಾಡಿದ ಅವರು, ತಾವು ಸಚಿವರಾಗಿದ್ದ ಸಂದರ್ಭ ಬೀಚ್ ಅಭಿವೃದ್ದಿಗೆ ಸಾಕಷ್ಟು ಗಮನಹರಿಸಲಾಗಿತ್ತು. ಆಗಿನ ರಾಜ್ಯ ಸರಕಾರದ ಮುತುವರ್ಜಿಯ ಮೇರೆಗೆ ಬೀಚ್‌ನಲ್ಲಿ ರಾಷ್ಟ್ರ ಮಟ್ಟದ ಸರ್ಫಿಂಗ್ ಉತ್ಸವ ನಡೆಸಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ಕೂ ಒತ್ತು ನೀಡಲಾಗಿತ್ತು. ಆದರೆ ಕಳೆದ ಸುಮಾರು ಮೂರು ವರ್ಷಗಳಿಂದ ಅಭಿವೃದ್ಧಿ ಇಲ್ಲಿ ಮರೀಚಿಕೆಯಾಗಿದೆ ಎಂದರು.
ವರ್ಷದಿಂದ ವರ್ಷಕ್ಕೆ ಕಡಲ್ಕೊರೆತದಿಂದಾಗಿ ಈ ಬೀಚ್ ಅಗಲಗೊಳ್ಳುತ್ತಿದ್ದು, ಸರ್ಫಿಂಗ್ ನಡೆಸಲೂ ಕಷ್ಟಕರವಾಗಿದೆ. ಈ ಹಿಂದೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಿಸಲಾಗಿತ್ತು. ಪ್ರವಾಸಿಗರ ರಕ್ಷಣೆಗಾಗಿ ವಾಚ್‌ಮನ್ ಹಾಗೂ ನಾಲ್ವರು ಲೈಫ್‌ಗಾರ್ಡ್‌ಗಳನ್ನು ನೇಮಕ ಮಾಡಿ ಸ್ಥಳೀಯ ಪಂಚಾಯತ್ ವತಿಯಿಂದ ಅವರಿಗೆ ವೇತನವನ್ನೂ ನೀಡಲಾಗುತ್ತಿತ್ತು. ಆದರೆ ಇದೀಗ ಎಲ್ಲವೂ ನಿಂತಿದೆ. ಪ್ರವಾಸಿಗರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಸಣ್ಣ ಹೊಟೇಲ್ ಹಾಗೂ ಇತರ ಅಂಗಡಿಗಳೂ ತೆರೆದಿದ್ದವು. ಆದರೆ ಕಡಲ್ಕೊರೆತದಿಂದಾಗಿ ಇಲ್ಲಿದ್ದ ಶೌಚಾಲಯ, ವಿಶ್ರಾಂತಿ ಸ್ಥಳ, ಹೊಟೇಲ್‌ಗಳೆಲ್ಲವೂ ನೀರುಪಾಲಾಗಿದೆ. ಪ್ರವಾಸೋದ್ಯಮ ಹಾಗೂ ನೀರಾವರಿ ಸಚಿವರು ಇನ್ನಾದರೂ ಈ ಬಗ್ಗೆ ಗಮನ ಹರಿಸಿ ಈ ಬೀಚ್‌ನ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದರು.
ಈ ಸಂದರ್ಭ ಧನಂಜಯ ಮಟ್ಟು, ವಸಂತ್ ಬೆರ್ನಾಡ್, ಟಿ.ಕೆ. ಸುಧೀರ್, ನೀರಜ್‌ಪಾಲ್, ಅನಿಲ್‌ಕುಮಾರ್, ಚಂದ್ರ ಕುಮಾರ್, ಧನರಾಜ್, ಅಶೋಕ್ ಪೂಜಾರ್, ಅಬ್ದುಲ್ ಖಾದರ್, ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
ಲೈಫ್ ಗಾರ್ಡ್‌ಗಳಿಲ್ಲದೆ ಪ್ರವಾಸಿಗರ ಜೀವಕ್ಕೆ ಅಪಾಯ
ಸಸಿಹಿತ್ಲು ಬೀಚ್‌ನಲ್ಲಿ ಸದ್ಯ ಲೈಫ್‌ಗಾರ್ಡ್ ಇಲ್ಲದೆ ಪ್ರವಾಸಿಗರ ಜೀವಕ್ಕೆ ಅಪಾಯ ಸಂಭವಿಸುತ್ತಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ನೀರುಪಾಲಾಗಿದ್ದು, ಅವರಲ್ಲಿ ಒಬ್ಬರು ಇನ್ನೂ ಪತ್ತೆಯಾಗಿಲ್ಲ. ಕಳೆದೆರಡು ವರ್ಷಗಳಲ್ಲಿ ಈ ಬೀಚ್‌ನಲ್ಲಿ ಸುಮಾರು 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಹಿಂದೆ ಸಾಕಷ್ಟು ಸ್ಛಳೀಯರು ಸಣ್ಣಪುಟ್ಟ ವ್ಯಾಪಾರಗಳಿಂದ ಜೀವನೋಪಾಯಕ್ಕೆ ದಾರಿ ಕಂಡುಕೊಂಡಿದ್ದರು. ಆದರೆ ಇದೀಗ ಕಡಲ್ಕೊರೆತದಿಂದಾಗಿ ಬೀಚ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದರಿಂದ ಸ್ಥಳೀಯರ ಉದ್ಯೋಗಾಕಾಶಕ್ಕೂ ತೊಂದರೆಯಾಗಿದೆ ಎಂದು ಸ್ಥಳೀಯರಾದ ಚಂದ್ರು ಅಭಿಪ್ರಾಯಿಸಿದರು.
ಬೀಚ್ ಉಳಿಸುವ ನಿಟ್ಟಿನಲ್ಲಿ ಅಭಿಯಾನ
ಸಸಿಹಿತ್ಲು ಬೀಚ್ ನೈಸರ್ಗಿಕದತ್ತವಾದ ಸುಂದರ ಬೀಚ್. ಮೂರು ವರ್ಷಗಳ ಹಿಂದೆ ಇಲ್ಲಿ ಸರ್ಫಿಂಗ್ ಮೂಲಕ ಅಂತಾರಾಷ್ಟ್ರೀಯ ಪ್ರವಾಸಿಗರ ಆಕರ್ಷಣೆಯ ಜತೆಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿತ್ತು. ಆದರೆ ಪ್ರಸಕ್ತ ಶಾಸಕರು ಕೇವಲ ಮಾತಿನಲ್ಲಿ ಮಾತ್ರ ಬೀಚ್ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಸಮುದ್ರ ಕಿನಾರೆಗಳಲ್ಲಿ ಕಡಲ್ಕೊರೆತ ಸಹಜ. ಆದರೆ ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಅಗತ್ಯ. ಇಲ್ಲಿ ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿ ಮೂಲಕ ಹಿಂದೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗಿದೆ. ಆ ವ್ಯವಸ್ಥೆಯನ್ನೇ ಕೈಬಿಡಲಾಗಿದೆ. ಹಿಂದೆ ಸರ್ಫಿಂಗ್ ಆದ ಜಾಗ ನೀರಿನಲ್ಲಿ ಮುಳುಗಿ ಹೋಗಿದೆ. ಪ್ರವಾಸಿಗರಿಗೆ ಇಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲವಾಗಿದೆ. ಬೀಚ್ ಸುತ್ತಮುತ್ತ ಸದ್ಯ ಸುಮಾರು 60 ಎಕರೆ ಸರಕಾರಿ ಜಮೀನಿದೆ. ಮರವಂತೆ ಬೀಚ್‌ನಂತೆ ಸಸಿಹಿತ್ಲು ಬೀಚ್ ಅಭಿವೃದ್ಧಿಗೂ ಸಾಕಷ್ಟು ಅವಕಾಶವಿದೆ. ಕಡಲ್ಕೊರೆತದಿಂದಾಗಿ ಸರ್ಫಿಂಗ್ ಬಳಿಕವೇ ಸುಮಾರು ಒಂದೂವರೆ ಎಕರೆಯಷ್ಟು ಜಾಗ ನೀರುಪಾಲಾಗಿದೆ. ರಾಜಕೀಯ ಬಿಟ್ಟು ಬೀಚ್ ಉಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರಕಾರ ಮಾಡಬೇಕು. ಈ ನಿಟ್ಟಿನಲ್ಲಿ ಸಸಿಹಿತ್ಲು ಬೀಚ್ ರಕ್ಷಣೆಗೆ ಸಂಬಂಧಿಸಿ ಅಭಿಯಾನವನ್ನು ಮಾಡಲಾಗುವುದು.
- ಮಿಥುನ್ ರೈ, ಕಾಂಗ್ರೆಸ್ ಮುಖಂಡ
ಶಾಂಭವಿ- ನಂದಿನಿ ನದಿ ಸಂಗಮದ ಕ್ಷೇತ್ರ
ಸಸಿಹಿತ್ಲು ಬೀಚ್ ಒಂದು ಕಡೆಯಿಂದ ಶಾಂಭವಿ ನದಿ ಹಾಗೂ ಮತ್ತೊಂದು ಕಡೆಯಿಂದ ನಂದಿನಿ ಸಂಗಮದ ಪುಣ್ಯ ಕ್ಷೇತ್ರ. ಈ ಜಾಗವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಸಸಿಹಿತ್ಲುವಿನಿಂದ ಚಿತ್ರಾಪುರಕ್ಕೆ ಸೇತುವೆ ನಿರ್ಮಿಸುವ ಮೂಲಕ ಸಸಿಹಿತ್ಲುವಿನ ಭಗವತಿ ದೇವಿ ದೇವಸ್ಥಾನದಿಂದ ಬಪ್ಪನಾಡಿಗೆ ನೇರವಾಗಿ ಭಂಡಾರ ಸಾಗಿಸುವ ಚಿಂತನೆಯೂ ಮಾಡಲಾಗಿತ್ತು. ಸದ್ಯ ತುರ್ತು ಕಾರ್ಯಕ್ಕಾಗಿ 2 ಕೋಟಿ ರೂ. ಸರಕಾರ ಬಿಡುಗಡೆ ಮಾಡಿದರೆ ಈ ಬೀಚನ್ನು ಇನ್ನಷ್ಟು ಕಡಲ್ಕೊರೆತದಿಂದ ಉಳಿಸಲು ಸಾಧ್ಯ.
-ಅಭಯಚಂದ್ರ ಜೈನ್, ಮಾಜಿ ಸಚಿವರು.