ಪತಿಯ ಕೊಲೆಯಲ್ಲಿ ಪೊಲೀಸ್ ಅಧಿಕಾರಿಯ ಕೈವಾಡ: ಮೃತ ಮನ್ಸುಖ್ ಹಿರೇನ್ ಪತ್ನಿಯ ಶಂಕೆ

Update: 2021-03-09 14:19 GMT

ಮುಂಬೈ,ಮಾ.9: ಖ್ಯಾತ ಉದ್ಯಮಿ ಮುಕೇಶ ಅಂಬಾನಿ ಅವರ ನಿವಾಸದ ಹೊರಗೆ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿದ್ದ ಪ್ರಕರಣವೀಗ ವಾಹನದ ಮಾಲಿಕ ಮನ್ಸುಖ್ ಹಿರೇನ್ ಪತ್ನಿ ವಿಮಲಾ ಹಿರೇನ್ ತನ್ನ ಪತಿಯ ಹತ್ಯೆಯಲ್ಲಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ಸಚಿನ್ ವಝೆ ಪಾತ್ರವಿರುವ ಬಗ್ಗೆ ಶಂಕೆ ವ್ಯಕ್ತಪಡಿಸುವುದರೊಂದಿಗೆ ಹೊಸ ತಿರುವನ್ನು ಪಡೆದುಕೊಂಡಿದೆ. ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದ ಮುಂದೆ ನೀಡಿರುವ ಹೇಳಿಕೆಯಲ್ಲಿ ವಿಮಲಾ,ತನ್ನ ಪತಿಯ ಸ್ಕೊರ್ಪಿಯೊ ವಾಹನವನ್ನು 2020 ನವಂಬರ್‌ನಿಂದ ಫೆ.5ರವರೆಗೆ ವಝೆ ಬಳಸುತ್ತಿದ್ದರು. ಪ್ರಕರಣದಲ್ಲಿ ಬಂಧನಕ್ಕೊಳಗಾಗುವಂತೆ ವಝೆ ತನ್ನ ಪತಿಗೆ ಸೂಚಿಸಿದ್ದರು ಮತ್ತು ಕೆಲವೇ ದಿನಗಳಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದರು ಎಂದು ಆರೋಪಿಸಿದ್ದಾರೆ.

ಹಿರೇನ್‌ಗೆ ಸೇರಿದ ಬೊಲೆರೊ ವಾಹನ ಫೆ.25ರಂದು ಅಂಬಾನಿಯವರ ನಿವಾಸಾ ಆ್ಯಂಟಿಲಾದ ಹೊರಗೆ ಪತ್ತೆಯಾಗಿತ್ತು ಮತ್ತು ಅದರಲ್ಲಿ ಜಿಲೆಟಿನ್ ಕಡ್ಡಿಗಳಿದ್ದವು.

ಫೆ.17ರಂದು ವಿಕ್ರೋಲಿಯಲ್ಲಿ ತನ್ನ ವಾಹನದ ಸ್ಟಿಯರಿಂಗ್ ವ್ಹೀಲ್ ಜಾಮ್ ಆಗಿದ್ದರಿಂದ ತಾನದನ್ನು ಅಲ್ಲಿಯೇ ನಿಲ್ಲಿಸಿ ಮನೆಗೆ ತೆರಳಿದ್ದೆ ಮತ್ತು ಅಲ್ಲಿಂದ ಅದನ್ನು ಯಾರೋ ಕಳವು ಮಾಡಿದ್ದರು ಎಂದು ತನಿಖೆಯ ವೇಳೆ ಹಿರೇನ್ ಪೊಲೀಸರಿಗೆ ತಿಳಿಸಿದ್ದ.

ಮಾ.4ರಂದು ರಾತ್ರಿ ಮನೆಯಿಂದ ಹೊರಗೆ ತೆರಳಿದ್ದ ಹಿರೇನ್ ವಾಪಸಾಗಿರಲಿಲ್ಲ. ಮರುದಿನ ಆತನ ಕುಟುಂಬವು ನವಪಾಡಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿತ್ತು. ಕೆಲವು ಗಂಟೆಗಳ ಬಳಿಕ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ವಾದ ರೇತಿಬಂದರ್ ಬಳಿಕ ಖಾಡಿಯಲ್ಲಿ ಹಿರೇನ್ ಮೃತದೇಹ ಪತ್ತೆಯಾಗಿತ್ತು.

ಸ್ಫೋಟಕ ಪತ್ತೆ ಪ್ರಕರಣವು ಎಸಿಪಿ ನಿತಿನ್ ಅಲಖ್ನೂರ್‌ಗೆ ಹಸ್ತಾಂತರವಾಗುವ ಮುನ್ನ ವಝೆ ತನಿಖೆಯನ್ನು ನಡೆಸುತ್ತಿದ್ದರು. ಪ್ರಕರಣವನ್ನೀಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ವಹಿಸಿಕೊಂಡಿದ್ದು,ಎಟಿಎಸ್ ಹಿರೇನ್ ಸಾವಿಗೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದೆ.

ವಝೆ ತನ್ನ ಪತಿಗೆ ಪರಿಚಿತರಾಗಿದ್ದರು ಮತ್ತು ಅವರು ತಮ್ಮ ಬೊಲೆರೊ ವಾಹನವನ್ನು ಬಳಸುತ್ತಿದ್ದರು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿರುವ ವಿಮಲಾ,ಅಂಬಾನಿ ನಿವಾಸದ ಹೊರಗೆ ಸ್ಫೋಟಕಗಳಿಂದ ತುಂಬಿದ್ದ ಬೊಲೆರೊ ವಾಹನ ಪತ್ತೆಯಾದ ಬಳಿಕ ಪೊಲೀಸ್ ಅಧಿಕಾರಿಗಳು ವಿಚಾರಣೆಗಾಗಿ ತಮ್ಮ ಮನೆಗೆ ಭೇಟಿ ನೀಡಲು ಆರಂಭಿಸಿದ್ದರು. ತನ್ನ ಪತಿ ಫೆ.26ರಿಂದ 28ರವರೆಗೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ವಝೆಯವರ ಜೊತೆಯಲ್ಲಿದ್ದರು. ಮಾ.2ರಂದು ವಝೆಯವರ ಸೂಚನೆಯ ಮೇರೆಗೆ ಅವರೊಂದಿಗೆ ತೆರಳಿದ್ದ ತನ್ನ ಪತಿ ಪೊಲೀಸರು ಮತ್ತು ಮಾಧ್ಯಮಗಳು ತನಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ದೂರನ್ನು ದಾಖಲಿಸಿದ್ದರು ಮತ್ತು ದೂರಿನ ಪ್ರತಿಗಳನ್ನು ಮುಖ್ಯಮಂತ್ರಿ,ಗೃಹಸಚಿವರು ಹಾಗೂ ಮುಂಬೈ ಮತ್ತು ಥಾಣೆಯ ಪೊಲೀಸ್ ಆಯುಕ್ತರಿಗೆ ರವಾನಿಸಿದ್ದರು ಎಂದು ಹೇಳಿದ್ದಾರೆ.

ತಾನು ಪ್ರಶ್ನಿಸಿದಾಗ ಪೊಲೀಸರು ತನಗೆ ಯಾವುದೇ ಕಿರುಕುಳ ನೀಡಿಲ್ಲವೆಂದು ಪತಿ ಉತ್ತರಿಸಿದ್ದರು. ಮನೆಯಲ್ಲಿಯೂ ಅವರು ಸಂತೋಷದಿಂದಲೇ ಇದ್ದರು ಎಂದು ತಿಳಿಸಿರುವ ವಿಮಲಾ,ತನ್ನ ಪತಿಯನ್ನು ಕೊಲೆ ಮಾಡಲಾಗಿದೆ ಎಂದು ತಾನು ನಂಬಿದ್ದೇನೆ ಮತ್ತು ಅವರ ಹತ್ಯೆಯಲ್ಲಿ ವಝೆ ಪಾತ್ರವಿದೆ ಎಂದು ಶಂಕಿಸಿದ್ದೇನೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯನ್ನು ನಡೆಸುವಂತೆ ಅವರು ಕೋರಿದ್ದಾರೆ.

ವಝೆ ಬಂಧನಕ್ಕೆ ಫಡ್ನವೀಸ್ ಆಗ್ರಹ

ಅಂಬಾನಿ ನಿವಾಸದ ಹೊರಗೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್‌ನ ‘ಎನ್‌ಕೌಂಟರ್ ವಿಶೇಷಜ್ಞ’ ವಝೆಯವರನ್ನು ಬಂಧಿಸುವಂತೆ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.

ವಿಮಲಾ ಹಿರೇನ್ ಎಟಿಎಸ್‌ಗೆ ನೀಡಿರುವ ಹೇಳಿಕೆಯನ್ನು ಸದನದಲ್ಲಿ ಓದಿದ ಅವರು,ಪ್ರಕರಣದಲ್ಲಿ ಬಂಧನಕ್ಕೊಳಗಾಗುವಂತೆ ಮತ್ತು ತಾನು ಜಾಮೀನಿನಲ್ಲಿ ಬಿಡುಗಡೆಗೊಳಿಸುವುದಾಗಿ ವಝೆ ಹಿರೇನ್‌ಗೆ ತಿಳಿಸಿದ್ದರು. ಇದನ್ನು ವಿಮಲಾ ವಿರೋಧಿಸಿದ್ದರು. ವಝೆ ಹಿರೇನ್‌ನನ್ನು ಕೊಲೆ ಮಾಡಿದ್ದಾರೆಂದು ಅವರು ಶಂಕಿಸಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News