×
Ad

ಗರ್ಭಿಣಿಯರಿಗೆ ತಾಯಿ ಕಾರ್ಡ್ ವಿತರಣೆ ಕಡ್ಡಾಯ : ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2021-03-09 21:08 IST

ಮಂಗಳೂರು, ಮಾ.9: ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮಾಡುವುದನ್ನು ಕಡಿಮೆ ಮಾಡಬೇಕು. ಗರ್ಭಿಣಿಯರಿಗೆ ತಾಯಿ ಕಾರ್ಡ್ ವಿತರಣೆ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗರ್ಭ ಪೂರ್ವ ಮತ್ತು ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಕ್ಷಮ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2012ರ ಜನಗಣತಿ ಆಧಾರದಲ್ಲಿ ಜಿಲ್ಲೆಯು 0-6 ಮಕ್ಕಳ ಲಿಂಗಾನುಪಾತ (ಸಿ.ಎಸ್.ಆರ್) ವಿವರದಂತೆ ರೆಡ್ ಝೋನ್‌ನಲ್ಲಿ ಇದೆ. 2020ನೇ ಸಾಲಿನ ಏಪ್ರಿಲ್‌ನಿಂದ 2021ನೇ ಸಾಲಿನ ಜನವರಿ ಮಾಹೆಯವರೆಗೆ 11,463 ಗಂಡು ಮಕ್ಕಳು ಹಾಗೂ 10,993 ಹೆಣ್ಣು ಮಕ್ಕಳ ಜನನವಾಗಿದೆ. ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಅಸಮತೋಲನ ಉಂಟಾಗುವುದನ್ನು ತಡೆಗಟ್ಟಬೇಕು ಎಂದರು.

ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಲಾಗುವುದು. ಯಾವುದೇ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಇಂತಹ ಪ್ರಕರಣಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಅಂತಹ ಸೆಂಟರ್‌ಗಳ ಪರವಾನಿಗೆಯನ್ನು ಯಾವುದೇ ಸೂಚನೆ ನೀಡದೇ ರದ್ದುಪಡಿಸಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಒಪಿಡಿಯಲ್ಲಿ, ಡೆಲಿವರಿ ಕೇಸ್‌ಗಳು ಬಂದಿವೆ ಎಂಬುದನ್ನು ಸಂಗ್ರಹಣೆ ಮಾಡಬೇಕು. ತಾಯಿ ಕಾರ್ಡ್ ಇಲ್ಲದವರ ಹೆರಿಗೆಯಾದ ಸಂದರ್ಭದಲ್ಲಿ ಅವರನ್ನು ತಪಾಸಣೆ ಮಾಡಿದ ವೈದ್ಯರು ಹಾಗೂ ಹೆರಿಗೆಯಾದ ಮಹಿಳೆಯ ಹೆಸರು, ಊರು ಇನ್ನಿತರ ವಿಳಾಸದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಬೇಕು ಎಂದರು.

ಬಾಲಿಕಾ ಸಾಪ್ಟ್‌ವೇರ್‌ನಲ್ಲಿ ಗರ್ಭಿಣಿಯರ ನೋಂದಣಿಯಾಗುವುದರಿಂದ ಆಶಾ ಕಾರ್ಯಕರ್ತೆಯರಿಗೆ ಅವರ ಬಗ್ಗೆ ಮಾಹಿತಿ ನೀಡಲು ಹಾಗೂ ತಾಯಿ ಕಾರ್ಡ್ ವಿತರಿಸಲು ಅನುಕೂಲವಾಗುವುದು ಎಂದು ಹೇಳಿದರು.

ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಆಸ್ಪತ್ರೆಗಳಲ್ಲಿ ಭ್ರೂಣ ಲಿಂಗ ಪತ್ತೆ ಕಾರ್ಯ ಕಂಡು ಬಂದಂತಹ ಸಂದರ್ಭದಲ್ಲಿ ಸ್ಕ್ಯಾನಿಂಗ್ ಯಂತ್ರವನ್ನು ಸೀಲ್ ಮಾಡಲಾಗುವುದಲ್ಲದೇ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಅಧಿಕಾರಿಗಳು ವಿಶೇಷ ತಂಡಗಳನ್ನು ರಚನೆ ಮಾಡಿ, ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅನಿರೀಕ್ಷಿತ ಭೇಟಿಯನ್ನು ಆಗಿಂದಾಗ್ಗೆ ಮಾಡುವುದರೊಂದಿಗೆ ಅಕ್ರಮಗಳನ್ನು ಪತ್ತೆ ಹಚ್ಚಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯಾರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 174 ಸ್ಕ್ಯಾನಿಂಗ್ ಸೆಂಟರ್‌ಗಳು ನೋಂದಣಿಯಾಗಿದ್ದು, ಅವುಗಳಲ್ಲಿ 159 ಕಾರ್ಯನಿರ್ವಹಿಸುತಿದ್ದು, 15 ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಸ್ಕ್ಯಾನಿಂಗ್ ಕಾರ್ಯ ನಡೆಸುತ್ತಿಲ್ಲ ಎಂದರು.

ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯು 148 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು 87 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ಇದೇ ಸಂದರ್ಭದಲ್ಲಿ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಕಾನೂನುಗಳ ಅನುಷ್ಠಾನದಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿದ್ದು, ಅಂತಹ ಸಂಸ್ಥೆಗಳಿಗೆ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ಅವರು ನಿರ್ವಹಿಸಬೇಕಾದ ದಾಖಲೆಗಳ ಪ್ರತಿಯನ್ನು ನೀಡಲಾಗಿರುತ್ತದೆ ಎಂದರು.

ಪ್ರತಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಗರ್ಭಿಣಿಯರ ನೋಂದಣಿ ದಾಖಲಾತಿ ಪುಸ್ತಕಗಳನ್ನು ನಿರ್ವಹಿಸಬೇಕು. ಸ್ಕ್ಯಾನಿಂಗ್ ಇಮೇಜ್‌ನ್ನು 2 ವರ್ಷದವರೆಗೆ ಕಡ್ಡಾಯವಾಗಿ ಸಂಗ್ರಹಿಸಿ ಇಡಬೇಕು. ಫಾರಂ ಬಿ ಅನುಮತಿ ಪತ್ರ ಮತ್ತು ಎಂಪ್ಯಾನೆಲ್‌ಮೆಂಟ್ ಲಿಸ್ಟ್‌ನ್ನು ಸ್ಕ್ಯಾನಿಂಗ್ ಕೊಠಡಿಯೊಳಗೆ ಪ್ರದರ್ಶಿಸಬೇಕು. ಸ್ಕ್ಯಾನಿಂಗ್ ಕೊಠಡಿಯೊಳಗೆ ಭ್ರೂಣಲಿಂಗ ಪತ್ತೆ ಮಾಡುವುದಿಲ್ಲ ಎನ್ನುವ ಸೂಚನಾ ಫಲಕಗಳನ್ನು ಪ್ರದರ್ಶಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷೆ ಡಾ. ದೀಪಾ ಪ್ರಭು, ಜಿಲ್ಲಾ ತಪಾಸಣಾ ಮೇಲ್ವಿಚಾರಣಾ ಸಮಿತಿಯ ಸದಸ್ಯರಾದ ಡಾ.ಅನಿತಾರಾಜ್ ಭಟ್, ಡಾ. ಚಿದಾನಂದ್ ಮೂರ್ತಿ, ಡಾ. ಅಮೃತ ಭಂಡಾರಿ, ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ. ವತ್ಸಲಾ ಕಾಮತ್, ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾದ ಡಾ. ಶೈಲಜಾ, ಡಾ. ರವಿಚಂದ್ರ, ಶೆರ್ಲಿ ಟಿ. ಬಾಬು, ವಸಂತ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News