×
Ad

ಹೌದಿ ಬಂಡುಕೋರರಿಗೆ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಇಚ್ಛೆ ಬೇಕು: ಅಮೆರಿಕ

Update: 2021-03-09 22:17 IST

ವಾಶಿಂಗ್ಟನ್, ಮಾ. 9: ಯೆಮನ್‌ನಲ್ಲಿ ಶಾಂತಿ ಸ್ಥಾಪಿಸುವುದಕ್ಕಾಗಿ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಇಚ್ಛೆಯನ್ನು ಹೌದಿ ಬಂಡುಕೋರ ಗುಂಪು ತೋರ್ಪಡಿಸಬೇಕು ಎಂದು ಅಮೆರಿಕ ಹೇಳಿದೆ.

ಇರಾನ್ ಬೆಂಬಲಿತ ಬಂಡುಕೋರರು ಸೌದಿ ಅರೇಬಿಯದ ಮೇಲೆ ವಾರಗಳ ಕಾಲ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

‘‘ಹೌದಿ ಚಳವಳಿಯ ನಾಯಕರು ದಾಳಿ ನಡೆಸುವುದನ್ನು ನಿಲ್ಲಿಸಬೇಕು ಹಾಗೂ ಮಾತುಕತೆ ಆರಂಭಿಸಬೇಕು’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸೋಮವಾರ ಹೇಳಿದರು.

ಹೌದಿ ಬಂಡುಕೋರರು 2015ರಲ್ಲಿ ಯೆಮನ್‌ನ ಅಂತರ್‌ರಾಷ್ಟ್ರೀಯ ಮಾನ್ಯತೆಯ ಸರಕಾರವನ್ನು ಕಿತ್ತೆಸೆದು ರಾಜಧಾನಿ ಸನಾ ಸೇರಿದಂತೆ ದೇಶದ ಬೃಹತ್ ಭೂಭಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಇದಾದ ತಿಂಗಳುಗಳ ಬಳಿಕ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ ಯೆಮನ್‌ನಲ್ಲಿ ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸಿತು.

ಆಂತರಿಕ ಯುದ್ಧದಿಂದಾಗಿ ಮಧ್ಯಪ್ರಾಚ್ಯದ ಅತ್ಯಂತ ಬಡ ದೇಶವಾದ ಯೆಮನ್ ಜರ್ಝರಿತಗೊಂಡಿತು.

ಅಂತರ್ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಬೈಡನ್ ಸರಕಾರವು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿರುವ ಬೆನ್ನಿಗೇ, ಇತ್ತೀಚಿನ ವಾರಗಳಲ್ಲಿ ಹೌದಿ ಬಂಡುಕೋರರು ಸೌದಿ ಅರೇಬಿಯದ ಮೇಲಿನ ದಾಳಿಯನ್ನು ಹೆಚ್ಚಿಸಿದ್ದಾರೆ.

ಸೌದಿ ಅರೇಬಿಯದ ಮೇಲೆ ಹೌದಿ ಬಂಡುಕೋರರು ಇತ್ತೀಚೆಗೆ ನಡೆಸುತ್ತಿರುವ ದಾಳಿಗಳು ‘ಅಸ್ವೀಕಾರಾರ್ಹ ಮತ್ತು ಅಪಾಯಕಾರಿ’ ಎಂಬುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ಈ ದಾಳಿಗಳು ಅವೆುರಿಕನ್ನರು ಸೇರಿದಂತೆ ನಾಗರಿಕರನ್ನು ಅಪಾಯಕ್ಕೆ ಗುರಿಪಡಿಸಿವೆ ಎಂದು ಅದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News