​1.9 ಟ್ರಿಲಿಯನ್ ಡಾಲರ್ ಕೋವಿಡ್ ಪರಿಹಾರ ಪ್ಯಾಕೇಜ್‌ಗೆ ಅಮೆರಿಕ ಸಂಸತ್ ಅಸ್ತು

Update: 2021-03-11 03:43 GMT

ವಾಷಿಂಗ್ಟನ್ : ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರ ಅಪರಿಮಿತ ಆರ್ಥಿಕ ಪರಿಹಾರ ಪ್ಯಾಕೇಜ್‌ಗೆ ಸಂಸತ್ ಅನುಮೋದನೆ ನೀಡಿದೆ.

ಇದು ಅಮೆರಿಕದ ಅಧ್ಯಕ್ಷರ ದೊಡ್ಡ ಜಯ ಎಂದು ವಿಶ್ಲೇಷಿಸಲಾಗುತ್ತಿದ್ದು, ಕೊರೋನ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿರುವ ಲಕ್ಷಾಂತರ ಕುಟುಂಬಗಳಿಗೆ ಮತ್ತು ಉದ್ಯಮ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡುವ ಹಾದಿ ಸುಗಮವಾಗಿದೆ.

1.9 ಟ್ರಿಯಲ್ ಯೋಜನೆಯಡಿ, ಕೋವಿಡ್-19 ಲಸಿಕೆಗಳಿಗೆ ಹಣ ಒದಗಿಸುವ ಜತೆಗೆ ಬಹುತೇಕ ಎಲ್ಲ ಅಮೆರಿಕನ್ನರಿಗೆ 1400 ಡಾಲರ್‌ಗಳ ಉತ್ತೇಜನ ಚೆಕ್‌ಗಳು ಲಭ್ಯವಾಗಲಿವೆ. ಪ್ರಜಾಪ್ರತಿನಿಧಿ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಯಾವ ರಿಪಬ್ಲಿಕನ್ ಸದಸ್ಯರೂ ಬೆಂಬಲ ನೀಡಲಿಲ್ಲವಾದರೂ, ಪ್ರಸ್ತಾವ ಅಂಗೀಕಾರವಾಯಿತು. ತಮ್ಮ ಉದ್ಘಾಟನಾ ಭಾಷಣದಲ್ಲಿ ನೀಡಿದ್ದ ಪ್ರತಿಜ್ಞೆಯಂತೆ ದೇಶವನ್ನು ಒಗ್ಗೂಡಿಸುವ ವಿಚಾರವನ್ನು ಬೈಡನ್ ಕೈಬಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಆಪಾದಿಸಿದರು.

ಈ ಪ್ರಸ್ತಾವವನ್ನು ಕಾನೂನು ಆಗಿ ಪರಿವರ್ತಿಸಿ, ಬೈಡನ್ ಶುಕ್ರವಾರ ಸಹಿ ಮಾಡುವ ನಿರೀಕ್ಷೆ ಇದೆ ಎಂದು ಶ್ವೇತಭವನ ಹೇಳಿದೆ. ಲಕ್ಷಾಂತರ ನಿರುದ್ಯೋಗಿಗಳಿಗೆ ದೊರಕುತ್ತಿರುವ ನಿರುದ್ಯೋಗ ಭತ್ಯೆಯ ಅವಧಿ ಪೂರ್ಣಗೊಳ್ಳುವ ಕಾರಣದಿಂದ ಕೆಲವೇ ದಿನ ಮೊದಲು ಹೊಸ ಕಾನೂನಿಗೆ ಬೈಡನ್ ಸಹಿ ಮಾಡುವರು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News