×
Ad

ಚುನಾಯಿತ ನಿರಂಕುಶಪ್ರಭುತ್ವಕ್ಕೆ ತಿರುಗಿದ ಭಾರತ: ಸ್ವೀಡನ್ ಸಂಸ್ಥೆಯ ವರದಿ

Update: 2021-03-11 09:37 IST
Source: Varieties of Democracy Institute

ಹೊಸದಿಲ್ಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಇದೀಗ ಚುನಾಯಿತ ನಿರಂಕುಶಪ್ರಭುತ್ವ ಹೊಂದಿದ ದೇಶವಾಗಿ ಪರಿವರ್ತನೆಯಾಗಿದೆ ಎಂದು ಸ್ವೀಡನ್ ಮೂಲದ ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ಎಂಬ ವಿಶ್ಲೇಷಣಾತ್ಮಕ ಸಂಶೋಧನಾ ಸಂಸ್ಥೆ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಈ ಸಂಸ್ಥೆ ಕಳೆದ ವರ್ಷ ಭಾರತೀಯ ಜನತಾ ಪಕ್ಷ ನಿರಂಕುಶ ಪ್ರಭುತ್ವದಲ್ಲಿ ಆಳ್ವಿಕೆ ಮಾಡುವ ಪಕ್ಷವನ್ನು ಹೋಲುತ್ತಿದೆ ಎಂದು ಹೇಳಿತ್ತು.

ಆಧಾರವಾಗುವ ಮಾಹಿತಿಗಳ ಅನಿಶ್ಚಿತತೆಯನ್ನು ವಿ-ಡೆಮ್ ಅಳೆಯುತ್ತದೆ. ಕಳೆದ ವರ್ಷ ಭಾರತವನ್ನು ಅನಿಶ್ಚಿತ ವರ್ಗದಲ್ಲಿ ಸೇರಿಸಲಾಗಿತ್ತು. ಆದರೆ ಈ ವರ್ಷ ಹೆಚ್ಚಿನ ಹಾಗೂ ಉತ್ತಮ ಮಾಹಿತಿಗಳು ಲಭ್ಯವಾಗಿದ್ದು, ಭಾರತವನ್ನು ಅಧಿಕ ಪ್ರಮಾಣದ ನಿಶ್ಚಿತತೆ ಹೊಂದಿದ, ಚುನಾಯಿತ ನಿರಂಕುಶಪ್ರಭುತ್ವ ಎಂಬ ವರ್ಗಕ್ಕೆ ಸೇರಿಸಲಾಗಿದೆ.

"ನಿರಂಕುಶಪ್ರಭುತ್ವ ವೈರಲ್ ಆಗುತ್ತಿದೆ" ಎಂಬ ಶೀರ್ಷಿಕೆಯ ವರದಿ ಪ್ರಕಾರ, 2014ರ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುವುದರೊಂದಿಗೆ ಭಾರತದ ನಿರಂಕುಶಪ್ರಭುತ್ವಕ್ಕೆ ಮತ್ತು ಹಿಂದೂ ರಾಷ್ಟ್ರೀಯವಾದಿ ಕಾರ್ಯಸೂಚಿಯ ಪ್ರಚಾರಕ್ಕೆ ನಾಂದಿ ಹಾಡಿದೆ"

"ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇದೀಗ ಚುನಾಯಿತ ನಿರಂಕುಶ ಪ್ರಭುತ್ವವಾಗಿ ಮಾರ್ಪಟ್ಟಿದೆ" ಎಂದು ವರದಿ ವಿವರಿಸಿದೆ. "ಭಾರತದ ನಿರಂಕುಶವಾದಿ ಪ್ರಕ್ರಿಯೆ ಕಳೆದ ಹತ್ತು ವರ್ಷಗಳಿಂದ ಮೂರನೇ ಅಲೆಯ ನಿರಂಕುಶ ಪ್ರಭುತ್ವದ ದೇಶಗಳ ಮಾರ್ಗವನ್ನೇ ಅನುಸರಿಸಿದೆ. ಮಾಧ್ಯಮ ಸ್ವಾತಂತ್ರ್ಯ, ಶೈಕ್ಷಣಿಕ ಕ್ಷೇತ್ರದ ಸ್ವಾತಂತ್ರ್ಯ ಹಾಗೂ ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಮೊದಲು ಹಾಗೂ ಬಹುಮಟ್ಟಿಗೆ ನಿರ್ಬಂಧಿಸಲಾಗಿದೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News