×
Ad

ಮಂಗಳೂರು: ಬೆಲೆ ಏರಿಕೆ ಹಿಂಪಡೆಯಲು ಆಗ್ರಹಿಸಿ ಸಿಪಿಐನಿಂದ ಪ್ರತಿಭಟನೆ

Update: 2021-03-11 15:00 IST

ಮಂಗಳೂರು, ಮಾ.11: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯನ್ನು ಖಂಡಿಸಿ ಸಿಪಿಐ ಮಂಗಳೂರು ತಾಲೂಕು ಸಮಿತಿ ವತಿಯಿಂದ ನಗರದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.

ಪ್ರತಿಭಟನಾಕರನ್ನುದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಜನ ಜೀವನ ದುಸ್ಥರವಾಗಿದೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಸಂದರ್ಭ ಬೆಲೆ ಏರಿಕೆ ವಿರುದ್ಧ ಸೈಕಲ್ ಹಿಡಿದು ಪ್ರತಿಭಟಿಸಿದ್ದ ಇಂದಿನ ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್ ಅವರ ಸೈಕಲ್ ಈಗ ಪಂಕ್ಚರ್ ಆಗಿದೆಯಾ ಎಂದು ಅವರು ಪ್ರಶ್ನಿಸಿದರು.

ಬೆಲೆ ಏರಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಾನು ಧರ್ಮ ಸಂಕಟದಲ್ಲಿದ್ದೇನೆ ಎಂದು ಹೇಳುವ ಮೂಲಕ ಹತಾಶೆ ವ್ಯಕ್ತಪಡಿಸಿದ್ದಾರೆ. ಇಂತಹ ಹತಾಶೆ ವ್ಯಕ್ತಪಡಿಸುವವರು ತಮ್ಮ ಹುದ್ದೆಯಿಂದ ಕೆಳಗಿಳಿಯಲಿ ಎಂದು ಅವರು ಹೇಳಿದರು.

ಸಿಪಿಐ ರಾಜ್ಯ ಸಮಿತಿ ಸದಸ್ಯ ಬಿ. ಶೇಖರ್ ಮಾತನಾಡಿ, ದೇಶದಲ್ಲಿ ತಪ್ಪು ಆರ್ಥಿಕ ಧೋರಣೆಯಿಂದ ಸಣ್ಣ ಉದ್ದಿಮೆಗಳು ನೆಲ ಕಚ್ಚುತ್ತಿವೆ. ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರದಿಂದ ಸಾಧ್ಯವಾಗುತ್ತಿಲ್ಲ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕರುಣಾಕರ್, ಸುರೇಶ್ ಕುಮಾರ್, ಪುಷ್ಪರಾಜ್, ಜಗತ್‌ಪಾಲ್, ಸುಲೋಚನ, ಮೀನಾಕ್ಷಿ, ಶ್ರೀನಿವಾಸ್, ಎಚ್.ವಿ. ರಾವ್ ಮೊದಲಾವದರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News