×
Ad

ಸನ್ಮಾನ- ಗೌರವಕ್ಕಿಂತ ಜನರ ಪ್ರೀತಿ ದೊಡ್ಡದು: ಪ್ರೊ. ಅಮೃತ ಸೋಮೇಶ್ವರ

Update: 2021-03-11 17:28 IST

ಮಂಗಳೂರು, ಮಾ.11: ಸ್ಥಾನ-ಮಾನಕ್ಕಿಂತ ಮಿಗಿಲಾಗಿ ತತ್ವ-ಸಿದ್ಧಾಂತಗಳಿಗಾಗಿ ಬದುಕುವುದು ಮನುಷ್ಯನ ಧ್ಯೇಯ ವಾಗಬೇಕು. ಅಂತಹವರಿಗೆ ಸಮಾಜದ ಅಭಿಮಾನವೇ ಶ್ರೀರಕ್ಷೆ. ನಾವು ಮಾಡಿದ ಸಾಧನೆಗೆ ಸನ್ಮಾನ ಅಥವಾ ಗೌರವ ಲಭಿಸುವುದು ಸಾಮಾನ್ಯ. ಆದರೆ ಅದಕ್ಕಿಂತ ಜನರು ತೋರುವ ಪ್ರೀತಿಯೇ ದೊಡ್ಡದು ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಹೇಳಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾದ ಹಿನ್ನಲೆಯಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ಉಳ್ಳಾಲ ಸೋಮೇಶ್ವರದ ಸ್ವಗೃಹ ’ಒಲುಮೆ’ಯಲ್ಲಿ ಏರ್ಪಡಿಸಲಾದ ’ಅಮೃತಾಭಿವಂದನಂ’ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಪ್ರತಿಯಾಗಿ ಅವರು ಮಾತನಾಡಿದರು.

ಡಾ.ಅಮೃತ ಸೋಮೇಶ್ವರ ಮತ್ತು ನರ್ಮದಾ ಸೋಮೇಶ್ವರ ದಂಪತಿಯನ್ನು ಮೈಸೂರು ಪೇಟ, ಶಾಲು, ಸ್ಮರಣಿಕೆ ಮತ್ತು ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು.

ಜೀವನ್ ಸೋಮೇಶ್ವರ ಮತ್ತು ಸತ್ಯಾ ಜೀವನ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ಪಿ.ಡಿ.ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿಜಯ ಲಕ್ಷ್ಮಿ ಕಟೀಲು ಮತ್ತು ಸುಮಾ ಪ್ರಸಾದ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News