‘ಸ್ನೇಹ ಸದನ’ದಲ್ಲಿ ಕೋವಿಡ್ ಪರಿಹಾರ ವಿತರಣೆ

Update: 2021-03-11 12:01 GMT

ಗುರುಪುರ, ಮಾ.11: ‘ಸ್ನೇಹ ಸದನ’ ಸಂಸ್ಥೆಯಿಂದ ಬಡಬಗ್ಗರು, ಕಷ್ಟದಲ್ಲಿರುವವರು ಮತ್ತು ರೋಗಿಗಳ ಸೇವೆ ನಡೆಯುತ್ತಿರು ವುದು ಶ್ಲಾಘನಾರ್ಹ. ಎಚ್‌ಐವಿ ಪೀಡಿತರು ಮತ್ತವರ ಮಕ್ಕಳು, ಅಶಕ್ತರಿಗೆ ನೆರವಾಗುವ ಸಂತ ಕಮಿಲಿಯಸ್ ಅನುಯಾಯಿಗಳ ಈ ಸಂಸ್ಥೆಯಿಂದ ಕೋವಿಡ್ ಮಹಾಮಾರಿ ಸಂದರ್ಭ ಅನೇಕ ಸಮಾಜಮುಖಿ ಕೆಲಸಗಳು ನಡೆದಿವೆ ಎಂದು ಬೆಳ್ತಂಗಡಿ ಧರ್ಮಪ್ರಾಂತದ ಬಿಷಪ್ ರೆ.ಫಾ.ಡಾ.ಲಾರೆನ್ಸ್ ಮುಕಿಝಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುಪುರ ಕೈಕಂಬದ ಸ್ನೇಹ ಸದನ (ಸ್ನೇಹ ಚಾರಿಟೇಬಲ್ ಟ್ರಸ್ಟ್) ಮತ್ತು ರೋಸಾ ಮಿಸ್ತಿಕಾ ಶಿಕ್ಷಣ ಸಂಸ್ಥೆಯು ಜಂಟಿಯಾಗಿ ‘ಸ್ನೇಹ ಸದನ’ದಲ್ಲಿ ಬುಧವಾರ ಆಯೋಜಿಸಿದ ಕೋವಿಡ್ ಪರಿಹಾರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಜೆಆರ್ ಲೋಬೊ, ಗುರುಪುರ ಧರ್ಮ ಪ್ರಾಂತದ ರೆ. ಫಾ. ಆಂತೋನಿ ಲೋಬೊ ಶುಭ ಹಾರೈಸಿದರು.

ಈ ಸಂದರ್ಭ ಸ್ನೇಹ ಸದನ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ರೆ. ಫಾ. ಬೇಬಿ ಎಲ್ಲಿಕಲ್ ಹಾಗೂ ಬೆಥನಿ ಪ್ರಾಂತ್ಯಾಧಿಕಾರಿ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜೀವದಾನ್ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಜಾನ್ಸಿ ಡಿಎಸ್‌ಸಿ, ರೋಸಾ ಮಿಸ್ತಿಕ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಸಿಸ್ಟರ್ ಜೂಲಿಯಾನಾ ಬಿಎಸ್ ಹಾಗೂ ಸ್ನೇಹ ಸದನ ಸಂಸ್ಥೆಯ ನಿರ್ದೇಶಕ ಫಾ. ತೇಜಿ ಸ್ವಾಗತಿಸಿದರು. ಶಿಕ್ಷಕಿ ಲೀನಾ ಕಾರ್ಯಕ್ರಮ ನಿರೂಪಿಸಿದರು.

ರೋಸಾ ಮಿಸ್ತಿಕ ಶಾಲೆ, ಬೆಥನಿ ಶಾಲೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳ ಪಾಲಕರಿಗೆ ಕೋವಿಡ್ ಪರಿಹಾರ ಕಿಟ್ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News