×
Ad

ಉಡುಪಿ: ಜಿಪಂ, ತಾಪಂ ಚುನಾವಣೆ ಸಿದ್ಧತೆಗಾಗಿ ಬಿಜೆಪಿಯಿಂದ ಗ್ರಾಮವಾಸ್ತವ್ಯಕ್ಕೆ ನಿರ್ಧಾರ

Update: 2021-03-11 19:08 IST

ಉಡುಪಿ, ಮಾ.11: ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಇದೇ ಮಾ.20 ರಿಂದ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ 32 ಮಹಾಶಕ್ತಿ ಕೇಂದ್ರಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಜಿಲ್ಲಾ ಬಿಜೆಪಿ ನಿರ್ಧರಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಕಡಿಯಾಳಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸುರೇಶ್ ನಾಯಕ್, ಪ್ರತೀ ದಿನ 3 ಗಂಟೆಗೆ 5-6 ಮಂದಿಯ ತಂಡ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ವಾಸ್ತವ್ಯ ಹೂಡಲಿದೆ ಎಂದರು.

ಪ್ರತಿದಿನ ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ, ನಂತರ ಪೇಜ್ ಪ್ರಮುಖ್, ಸಕ್ರಿಯ ಕಾರ್ಯಕರ್ತರೊಂದಿಗೆ ಸಮಾಲೋಚನೆ, ಬೂತ್ ಸಮಿತಿ ಕಾರ್ಯವೈಖರಿ ಪರಿಶೀಲನೆ ನಡೆಯಲಿದೆ. ಉಡುಪಿ ಜಿಪಂನ 30 ಕ್ಷೇತ್ರಗಳಲ್ಲಿ 26 ಹಾಗೂ 85 ತಾಪಂ ಕ್ಷೇತ್ರ ಗಳಲ್ಲಿ 70ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ ಎಂದರು.

ಪಿತೂರಿ ವಿರುದ್ಧ ಪಾದಯಾತ್ರೆ: ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ಕುರಿತಂತೆ ಕಾಂಗ್ರೆಸ್ ನಡೆಸುತ್ತಿ ರುವ ಪಿತೂರಿ ವಿರುದ್ಧ ಜನಜಾಗೃತಿ ಮೂಡಿಸಲು ಎಪ್ರಿಲ್ 2ನೇ ವಾರ ಬೈಂದೂರಿನಿಂದ ಉಡುಪಿವರೆಗೆ ಜಿಲ್ಲಾ ಬಿಜೆಪಿ ವತಿ ಯಿಂದ 3 ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಇವುಗಳಲ್ಲಿ 3 ರಿಂದ 5 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕುಯಿಲಾಡಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಶಿಲ್ಪಾ ಸುವರ್ಣ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಸಹ ವಕ್ತಾರ ಶಿವಕುಮಾರ್, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News