×
Ad

ಮಾ.14ಕ್ಕೆ ತುಳುಕೂಟದಿಂದ ಕೆಮ್ತೂರು ದೊಡ್ಡಣ್ಣ ಶೆಟ್ರ ಸಂಸ್ಮರಣೆ

Update: 2021-03-11 19:09 IST

ಉಡುಪಿ, ಮಾ.11: ತುಳುಕೂಟ ಉಡುಪಿ ವತಿಯಿಂದ ಸ್ವಾತಂತ್ರ ಹೋರಾಟಗಾರ, ಹಿರಿಯ ನಾಟಕಕಾರ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮ ಮಾ.14ರ ರವಿವಾರ ಸಂಜೆ ಎಂಜಿಎಂ ಕಾಲೇಜಿನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ತುಳು ನಾಟಕ ಪ್ರದರ್ಶನ, ತುಳು ನಾಟಕ ರಂಗಭೂಮಿ ಕುರಿತು ವಿಚಾರಸಂಕಿರಣ ಹಾಗೂ ಹಿರಿಯ ಕವಿ ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ ಇಡೀ ದಿನ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಗಳನ್ನು ನೀಡಿದ ಅವರು, ಅಂದು ಬೆಳಗ್ಗೆ 9 ರಿಂದ ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಸ್ಪರ್ಧೆ ಯನ್ನು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪುಂಡಲೀಕ ಮರಾಠೆ ಉದ್ಘಾಟಿಸುವರು. ಈ ವೇಳೆ ತುಳುಕೂಟದ ಪ್ರಕಾಶ್ ಸುವರ್ಣ ಕಟಪಾಡಿ ಇವರು ಬರೆದ ತುಳು ಭಕ್ತಿ ಹಾಗೂ ಭಾವಗೀತೆಗಳ ಕೃತಿ ‘ಬೊಲ್ಪು’ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರನ್ನು ಸನ್ಮಾನಿಸಲಾಗುವುದು ಎಂದರು.

ಅಪರಾಹ್ನ 2 ಗಂಟೆಗೆ ಗೀತಾಂಜಲಿ ಸಭಾಂಗಣದಲ್ಲಿ ತುಳುಕೂಟ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವುಗಳ ಆಶ್ರಯದಲ್ಲಿ ತುಳು ನಾಟಕ ರಂಗಭೂಮಿ ‘ನಿನ್ನೆ-ಇಂದು-ನಾಳೆ’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ನಟ ಎಂ.ಎಸ್. ಭಟ್ ಉಡುಪಿ, ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹಾಗೂ ನೀನಾಸಂ ಪದವೀಧರ ಕ್ರಿಸ್ಟೋಫರ್ ಮಂಗಳೂರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 5:30ಕ್ಕೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ ವನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಉದ್ಘಾಟಿಸಲಿದ್ದು, ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕಲ್ತಲ್‌ಸಾರ್, ಶಾಸಕ ಕೆ.ರಘುಪತಿ ಭಟ್, ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕಾ ಅತಿಥಿಗಳಾಗಿ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ತುಳುಕೂಟದ ಕಾರ್ಯದರ್ಶಿ, ಸಾಹಿತಿ ಗಂಗಾಧರ್ ಕಿದಿಯೂರು ತುಳು ಲಿಪಿಯಲ್ಲಿ ಬರೆದ ಚೊಚ್ಚಲ ತುಳು ಕೃತಿ ‘ಪಿಂಗಾರದ ಬಾಲೆ ಸಿರಿ’ ಬಿಡುಗಡೆಗೊಳ್ಳಲಿದೆ. ಈ ಸಂದರ್ಭದಲ್ಲಿ ತುಳುಭಾವಗೀತೆ ಸ್ಪರ್ಧೆಯ ವಿಜೇತರು ಹಾಗೂ ಮಂಗಳೂರು ವಿವಿ ಅಂತರ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ತುಳು ಮಿನದನ ವರ್ಚುವೆಲ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಕೊನೆಯಲ್ಲಿ ಮಂಗಳೂರು ಕೈಕಂಬದ ವಿಧಾತ್ರೀ ಕಲಾವಿದೆರ್ ಇವರಿಂದ ‘ಒರಿಯರ್ದೊರಿ ಅಸಲ್’ ತುಳು ನಾಟಕ ಪ್ರದರ್ಶನವಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ನಾಟಕ ಸ್ಪರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ತಾರಾ ಆಚಾರ್ಯ, ಭಾವಗೀತೆ ಸ್ಪರ್ಧೆಯ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ, ಕೆ.ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News