ಭಟ್ಕಳ: ಮಹಿಳೆಯ ಕೊಲೆ ಪ್ರಕರಣ; ಇಬ್ಬರು ಆರೋಪಿಗಳು ಸೆರೆ
ಭಟ್ಕಳ: ತಾಲೂಕಿನ ಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ ಮನೆಯಲ್ಲಿದ್ದ ಒಂಟಿ ಮಹಿಳೆಯೊರ್ವರನ್ನು ಬರ್ಬರ ಹತ್ಯೆ ಮಾಡಿದ ಪ್ರಕರಣವನ್ನು ಭೇದಿಸಿದ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
ಲಕ್ಷ್ಮಿ ಕೃಷ್ಣ ನಾಯ್ಕ ಮೃತ ಮಹಿಳೆ, ಉತ್ತರ ಕೊಪ್ಪಾ ನಿವಾಸಿ ಮಾದೇವ ನಾಯ್ಕ ಮತ್ತು ಮಾಸ್ತಮ್ಮ ನಾಯ್ಕ ಬಂಧಿತ ಆರೋಪಿಗಳು.
ಮೃತರ ಮನೆಯ ಎದುರು ಇರುವ ದಾರಿ ಪಕ್ಕದಲ್ಲಿ ಬೆಳೆದ ಮರದ ಕೊಂಬೆ ತುಂಡಾಗಿ ಬಿದ್ದ ವಿಚಾರದಲ್ಲಿ ಮೃತರೊಂದಿಗೆ ಮಾಸ್ತಮ್ಮ ನಾಯ್ಕ, ಮಾದೇವ ನಾಯ್ಕ, ಎನ್ನುವವರು ಗಲಾಟೆ ನಡೆಸಿದ್ದರು. ನಂತರ ಜನವರಿ 23ರ ರಾತ್ರಿ ಮನೆಯೊಳಗೆ ನುಗ್ಗಿ ಬೆಂಕಿ ಹಾಕಿದ್ದು ನಂತರ ಅವರನ್ನು ಬೆಂಕಿಗೆ ದೂಡಲು ಪ್ರಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಅವರ ತಲೆಗೆ ಆಯಧದಿಂದ ಬಡಿದು ಹಲ್ಲೆ ನಡೆಸಿದ್ದಾರೆ. ಮೃತರು ಧರಿಸಿದ ಸೀರೆಯನ್ನು ಕೊರಳಿಗೆ ಹಾಕಿ ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸುವ ಪ್ರಯತ್ನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.