ದ.ಕ. ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ 7,346 ಮಂದಿಗೆ ಕೋವಿಡ್ ಲಸಿಕೆ: ಡಾ.ರಾಜೇಂದ್ರ
ಮಂಗಳೂರು, ಮಾ.12: ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕೋವಿಡ್ ಲಸಿಕೆ ಪಡೆದವರಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿದ್ದು, ಮೂರನೇ ಹಂತದ ಲಸಿಕೆ ಅಭಿಯಾನದಡಿ ಮಾ.11ರವರೆಗೆ 60 ವರ್ಷ ಮೇಲ್ಪಟ್ಟ 7346 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಮಾಹಿತಿ ನೀಡಿದ ಅವರು, ಬಿಪಿ, ಶುಗರ್ ಹೊಂದಿರುವ 45 ವರ್ಷ ಮೇಲ್ಪಟ್ಟ 59 ವರ್ಷದೊಳಗಿನ ಒಟ್ಟು 913 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಅವರು ಮಾಹಿತ ನೀಡಿದರು.
ಪ್ರಥಮ ಹಂತದಲ್ಲಿ ಆರೋಗ್ಯ ಸೇವೆಯಲ್ಲಿರುವವರು 33,887 ಮಂದಿ ಪ್ರಥಮ ಡೋಸ್ ಪಡೆದುಕೊಂಡಿದ್ದರೆ, 20,374 ಮಂದಿ ಎರಡನೆ ಡೋಸ್ ಪಡೆದಿದ್ದಾರೆ. ಮುಂಚೂಣಿ ಸೇವೆಯಲ್ಲಿರುವವರಲ್ಲಿ 5,454 ಮಂದಿ ಪ್ರಥಮ ಡೋಸ್ ಹಾಗೂ 727 ಮಂದಿ ದ್ವಿತೀಯ ಡೋಸ್ ಪಡೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ದೇವಸ್ಥಾನಗಳ ಪ್ರಧಾನ ಅರ್ಚಕರು, ಧರ್ಮದರ್ಶಿಗಳು, ಚರ್ಚ್‌ನ ಧರ್ಮಗುರು, ಬಿಷಪ್ ಹಾಗೂ ಮಸೀದಿಯ ಧರ್ಮಗುರುಗಳು ಕೂಡ ಲಸಿಕೆ ಹಾಕಿಸಿಕೊಂಡು ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳಲು ಸಂದೇಶ ನೀಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನವೊಂದಕ್ಕೆ 100 ಮಂದಿಗೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 150, ತಾಲೂಕು ಆಸ್ಪತ್ರೆಗಳಲ್ಲಿ 200 ಮಂದಿ, ಜಿಲ್ಲಾಸ್ಪತ್ರೆಯಲ್ಲಿ 300 ಮಂದಿಗೆ ಹಾಗೂ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ತಲಾ 500 ಮಂದಿಗೆ ದಿನವೊಂದಕ್ಕೆ ಲಸಿಕೆ ನೀಡಲು ಅವಕಾಶವಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಮಾಹಿತಿ ನೀಡಿದರು.
ದ.ಕ. ಜಿಲ್ಲೆಯ 66 ಪ್ರಾಥಮಿಕ ಆರೋಗ್ಯ ಕೇಂದ್ರ, 10 ನಗರ ಆರೋಗ್ಯ ಕೇಂದ್ರ, ನಾಲ್ಕು ತಾಲೂಕು ಆಸ್ಪತ್ರೆ, 8 ಮೆಡಿಕಲ್ ಕಾಲೇಜುಗಳು, ಜಿಲ್ಲಾಸ್ಪತ್ರೆ ವೆನ್ಲಾಕ್ ಹಾಗೂ 6 ಸಮುದಾಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯನ್ನು ಸದ್ಯ ನೀಡಲಾಗುತ್ತಿದೆ. ಆನ್‌ಲೈನ್ ನೋಂದಣಿ ಮಾಡಿಕೊಂಡು ನಿಗದಿತ ದಿನಾಂಕದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಅವಕಾಶವೂ ಇದೆ. ಆದರೆ ಲಸಿಕೆ ಹಾಕಲು ಬಯಸುವ ಹಿರಿಯ ನಾಗರಿಕರು ನೇರವಾಗಿ ಸಂಬಂಧಪಟ್ಟ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕಿ ಹಾಕಿಸಿಕೊಳ್ಳಬಹುದಾಗಿದೆ. ಹಿರಿಯ ನಾಗರಿಕರ ಕೇಂದ್ರ, ವೃದ್ಧಾಶ್ರಮಗಳಿಂದ ಹೆಚ್ಚು ನಡೆದಾಡಲು ಅಶಕ್ತರಾಗಿರುವವರಿಗೆ ಸಮೀಪದ ಲಸಿಕಾ ಕೇಂದ್ರಗಳಿಗೆ ಶಾಲಾ ಬಸ್ ವ್ಯವಸ್ಥೆ ಮೂಲಕ ಕರೆದೊಯ್ದು ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು. ದ.ಕ. ಜಿಲ್ಲೆಯಲ್ಲಿ ಲಸಿಕಾ ಕೇಂದ್ರಗಳಲ್ಲಿ ವಾರದ ಏಳು ದಿನವೂ ನೀಡಲು ಸಾಧ್ಯವಾಗುವಷ್ಟು ಲಸಿಕೆಗಳು ಲಭ್ಯವಿದೆ.
-ಡಾ. ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದ.ಕ.