ಉಡುಪಿ: ಸುಧಾರಿತ ಟೆಲಿಸ್ಕೋಪ್ ತಯಾರಿಸಿದ ಮನೋಹರ್
ಉಡುಪಿ, ಮಾ.12: ಮಣಿಪಾಲದ ಎಂಐಟಿ ಉದ್ಯೋಗಿಯಾಗಿರುವ ಪರ್ಕಳದ ಆರ್. ಮನೋಹರ್ ಅವರು ಆಕಾಶಕಾಯಗಳ ವೀಕ್ಷಣೆಗಾಗಿ ತಾವು ತಯಾರಿಸಿದ ಟೆಲಿಸ್ಕೋಪ್‌ನಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದು, ತಾವು ಹೊಸದಾಗಿ ಆವಿಷ್ಕರಿಸಿದ ದೂರದರ್ಶಕದಿಂದಲೇ ಮಾ.28ರಂದು ಗೋಚರಿಸುವ ‘ಸೂಪರ್‌ಮೂನ್’ನ್ನು ಸಾರ್ವಜನಿಕರಿಗೆ ತೋರಿಸಲು ನಿರ್ಧರಿಸಿದ್ದಾರೆ.
ಮನೋಹರ್ ಆವಿಷ್ಕರಿಸಿರುವ ನವೀಕೃತ ಟೆಲಿಸ್ಕೋಪ್‌ನಿಂದ ಬಾನಂಗಳದಲ್ಲಿ ಕಾಣುವ ಗ್ರಹಗಳು, ಇನ್ನಷ್ಟು ಹತ್ತಿರದಲ್ಲಿ, ದೊಡ್ಡ ಗಾತ್ರದಲ್ಲಿ ಕಣ್ಣಿಗೆ ಗೋಚರಿಸಲಿವೆ. ಈ ಹಿಂದೆ ಇವರು ನಿರ್ಮಿಸಿದ ಟೆಲಿಸ್ಕೋಪ್ಗೆ ಇವರಿಗೆ ಪೇಟೆಂಟ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈಗ ತಯಾರಿಸಿರುವ ಟೆಲಿಸ್ಕೋಪ್‌ನ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಆಕಾಶಕಾಯಗಳ ವೀಕ್ಷಣೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಆರ್. ಮನೋಹರ್, ತಾವು ತಯಾರಿಸಿದ ದೂರದರ್ಶಕದ ಮೂಲಕ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಬಾನಂಗಳದಲ್ಲಿ ಕಾಣುವ ಗ್ರಹ, ನಕ್ಷತ್ರಗಳನ್ನು ಗೃಹಣ ಹಾಗೂ ಇತರ ಸಂದರ್ಭಗಳಲ್ಲಿ ಆಯ್ದ ಕಡೆಗಳಲ್ಲಿ ಉಚಿತವಾಗಿ ತೋರಿಸುತಿದ್ದರು. ಇದೀಗ ಮಾ.28ರ ಹೋಳಿ ಹುಣ್ಣಿಮೆಯ ದಿನದಂದು ಬಾನಂಗಳದಲ್ಲಿ ಮುಸ್ಸಂಜೆಯಲ್ಲಿ ಕಾಣಿಸುವ ಬೃಹತ್ ಗಾತ್ರದ ‘ಸೂಪರ್ ಮೂನ್’ ಚಂದ್ರ ದರ್ಶನಕ್ಕೆ ಪರ್ಕಳದ ಸ್ವಾಗತ್ ಹೋಟೆಲ್ ಬಳಿ ಅವಕಾಶ ಕಲ್ಪಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ಮನೋಹರ್ ಅವರು ಹೊಸ ಟೆಲಿಸ್ಕೋಪ್ನಲ್ಲಿ ನೂತನ ಮಾದರಿಯ ಝೂಮ್ ಲೆನ್ಸ್ ಜೋಡಿಸಿದ್ದು, ಇದರಿಂದ ಆಕಾಶಕಾಯ ಇನ್ನಷ್ಟು ಸಮೀಪದಲ್ಲಿ, ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿದೆ. ನೂತನ ಲೆನ್ಸ್ ಗಳು ಶೇ.30ರಷ್ಟು ಹೆಚ್ಚಿನ ಝೂಮ್ ಒದಗಿಸುತಿದ್ದು ಇದರಿಂದಾಗಿ ಸುಲಭವಾಗಿ ಗ್ರಹಣವನ್ನು ವೀಕ್ಷಿಸಲು ಸಾಧ್ಯ. ಅಲ್ಲದೇ ಉಪಕರಣದ ಗಾತ್ರವೂ ಕಡಿಮೆಯಾಗಿದ್ದು ಈಗ ಅದು ಮೂರು ಅಡಿ ಗಾತ್ರದ್ದಾಗಿದೆ. ಹೀಗಾಗಿ ಬಳಕೆಯೂ ಸುಲಭವಾಗಿದೆ ಎಂದು ಮನೋಹರ್ ತಿಳಿಸಿದ್ದಾರೆ.