×
Ad

ಸುಮಂಗಲಾ ರತ್ನಾಕರ್‌ಗೆ ನಂದಗೋಕುಲ ಕಲಾ ಪುರಸ್ಕಾರ

Update: 2021-03-12 19:59 IST

ಉಡುಪಿ, ಮಾ.12:ಅರೆಹೊಳೆ ಪ್ರತಿಷ್ಠಾನ ಪ್ರತೀ ವರ್ಷ ಆಯೋಜಿಸುವ ನೃತ್ಯವರ್ಷಾದ ಸಂದರ್ಭದಲ್ಲಿ, ನೃತ್ಯ ಕಲಾವಿದರಿಗೆ ನೀಡುವ ವಾರ್ಷಿಕ ಪ್ರಶಸ್ತಿ ‘ನಂದಗೋಕುಲ ಕಲಾ ಪುರಸ್ಕಾರ’ಕ್ಕೆ 2020ನೇ ಸಾಲಿನ ಪ್ರಶಸ್ತಿಗೆ ಖ್ಯಾತ ನೃತ್ಯ ಗುರು, ಯಕ್ಷಗಾನ ಕಲಾವಿದೆ ವಿದುಷಿ ಸುಮಂಗಲಾ ರತ್ನಾಕರ್‌ರನ್ನು ಆಯ್ಕೆ ಮಾಡಲಾಗಿದೆ.

ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕೂಚುಪುಡಿ, ಯಕ್ಷಗಾನ, ತಾಳ ಮದ್ದಲೆ, ಕಾರ್ಯಕ್ರಮ ನಿರೂಪಣೆ, ನೃತ್ಯ ಸಾಹಿತಿ, ಹವ್ಯಾಸಿ ಲೇಖಕಿ, ಸಂಪನ್ಮೂಲ ವ್ಯಕ್ತಿ, ನಟುವನ್ನಾರ್, ಕಾರ್ಯಕ್ರಮ ಸಂಘಟಕಿಯಾಗಿ ಗುರುತಿಸಿಕೊಂಡು, ನಾಟ್ಯಾರಾಧನಾ ಮತ್ತು ಯಕ್ಷಾರಾಧನಾ ಎಂಬ ಸಂಸ್ಥೆಗಳ ಮೂಲಕ ಭರತನಾಟ್ಯ, ಯಕ್ಷಗಾನ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ಸಹಯೋಗದೊಂದಿಗೆ ಇದೇ ಮಾ.27ರ ಸಂಜೆ 6:30ಕ್ಕೆ ನಗರದ ನಂತೂರಿನ ಪಾದುವಾ ಥಿಯೇಟರ್ ಹಬ್‌ನಲ್ಲಿ ನಡೆಯಲಿರುವ ನೃತ್ಯವರ್ಷಾ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ ಗೌರವ ಮೊತ್ತವನ್ನು ಒಳಗೊಂಡಿರುತ್ತದೆ ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮತ್ತು ಗಾನ ನೃತ್ಯ ಅಕಾಡೆಮಿಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News