ಅಮೆರಿಕ ಈಗ ತನ್ನ ನೈಜ ಹಾದಿಗೆ ಮರಳುತ್ತಿದೆ: ಬೈಡನ್

Update: 2021-03-12 14:35 GMT

 ವಾಶಿಂಗ್ಟನ್, ಮಾ. 12: ಅಮೆರಿಕ ಈಗ ಮಾರಕ ಕೊರೋನ ವೈರಸ್ ಸಾಂಕ್ರಾಮಿಕವನ್ನು ಸೋಲಿಸುವ ಹಾದಿಯಲ್ಲಿದೆ ಹಾಗೂ ದೇಶದ ಹದಗೆಟ್ಟ ಆರ್ಥಿಕತೆ ಚೇತರಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದಾರೆ. ಇದರೊಂದಿಗೆ, ಅಮೆರಿಕವು ತನ್ನ ಹಾದಿಗೆ ಮರಳುತ್ತಿದೆ ಎಂದು ಅವರು ತನ್ನ ದೇಶವಾಸಿಗಳಿಗೆ ಘೋಷಿಸಿದ್ದಾರೆ.

ಕೊರೋನ ವೈರಸ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾದ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಈವರೆಗೆ 2,91,50,068 ಮಂದಿಗೆ ಕೊರೋನ ವೈರಸ್ ಸೋಂಕು ತಗಲಿದೆ ಹಾಗೂ 5,29,102 ಮಂದಿ ಮೃತಪಟ್ಟಿದ್ದಾರೆ.

ಸುಮಾರು 1.8 ಕೋಟಿ ಅಮೆರಿಕನ್ನರು ಈಗಲೂ ನಿರುದ್ಯೋಗ ವಿಮೆಯನ್ನು ಅವಲಂಬಿಸಿದ್ದಾರೆ ಹಾಗೂ ಸುಮಾರು 4 ಲಕ್ಷ ಸಣ್ಣ ಉದ್ದಿಮೆಗಳು ಖಾಯಂ ಮುಚ್ಚಿವೆ.

 ‘‘ಲಸಿಕೆಗಳನ್ನು ದಾಖಲೆ ಸಮಯದಲ್ಲಿ ಅಭಿವೃದ್ಧಿಪಡಿಸಿ, ಉತ್ಪಾದಿಸಿ, ವಿತರಿಸಲಾಗಿದೆ. ಇದು ನಿಜವಾದ ವೈಜ್ಞಾನಿಕ ಪವಾಡವಾಗಿದೆ. ಇದು ಯಾವುದೇ ಒಂದು ದೇಶವು ಸಾಧಿಸಿರುವ ಸಾರ್ವಕಾಲಿಕ ಸಾಧನೆಗಳ ಪೈಕಿ ಒಂದಾಗಿದೆ. ‘ಪರ್ಸಿವರೆನ್ಸ್’ ಶೋಧಕ ನೌಕೆಯು ಮಂಗಳ ಗ್ರಹದಲ್ಲಿ ಇಳಿದಿದೆ ಹಾಗೂ ಕೆಂಪು ಗ್ರಹದ ಅಮೋಘ ಚಿತ್ರಗಳನ್ನು ಕಳುಹಿಸಿದೆ. ಅಮೆರಿಕವು ತನ್ನ ನೈಜ ದಾರಿಗೆ ಮರಳುತ್ತಿದೆ’’ ಎಂದು ಬೈಡನ್ ಹೇಳಿದರು.

ಅವೆುರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 50ನೇ ದಿನದ ಸಂದರ್ಭದಲ್ಲಿ ಅವರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News