ಗಡಿ ಪ್ರವೇಶಕ್ಕೆ ಗ್ರಾಮೀಣ ಟಾಸ್ಕ್‌ಫೋರ್ಸ್ ರಚನೆ
ಮಂಗಳೂರು, ಮಾ.12: ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಹಂತದ ಅಲೆ ಕಾಣಿಸಿರುವುದು ಹಾಗೂ ಕೇರಳದಲ್ಲಿ ಮತ್ತೆ ಕೋವಿಡ್ ಸಂಖ್ಯೆಯಲ್ಲಿ ಏರಿಕೆಯಾಗಿರುವುದರಿಂದ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗಡಿ ಹಾದು ಹೋಗುವವರ ಮೇಲೆ ನಿಗಾ ಇರಿಸಲು ಮಾ.13ರಿಂದ ಗ್ರಾಮ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯೇ ಗಡಿ ಪ್ರದೇಶದ ಪ್ರಯಾಣಿಕರ ಮೇಲೆ ನಿಗಾ ಇರಿಸಲಿದೆ ಎಂದರು.
ಅಧಿಕಾರಿ ಮಟ್ಟದ ಸಭೆಯಲ್ಲಿ ಗ್ರಾಮ ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿ ಅದಕ್ಕೆ ಕೊರೋನಾ ತಪಾಸಣೆ ಹಾಗೂ ಗಸ್ತು ನಡೆಸುವಂತೆ ಸೂಚನೆ ನೀಡಲಾಗಿದೆ. ಕೇರಳದಲ್ಲೂ ಅಸೆಂಬ್ಲಿ ಚುನಾವಣೆ ಸಮೀಪಿಸಿರುವುದರಿಂದ ಸಾಕಷ್ಟು ಗಡಿ ಭದ್ರತೆ ಅನಿವಾರ್ಯ. ಇದೇ ಸಂದರ್ಭದಲ್ಲಿಕೇರಳದಿಂದ ಇಲ್ಲಿಗೆ ಆಗಮಿಸುವವರು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಸರ್ಟಿಫಿಕೆಟ್ ತರಬೇಕು. ಗಡಿಯೊಳಗೆ ಬಂದು ಇಲ್ಲಿರುವ ಕೇಂದ್ರಗಳಲ್ಲೂ ಕೋವಿಡ್ ಟೆಸ್ಟ್ ಮಾಡಿಸಬಹುದು. ಈಗ ಗಡಿ ಹಾದು ಹೋಗಲು ಕಟ್ಟುನಿಟ್ಟು ಇಲ್ಲವಾದರೂ ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳ ಕೊರೋನ ಕಾಣಿಸಿದೆ. ಆದರೂ ಉಭಯ ಜಿಲ್ಲೆಗಳ ನಿತ್ಯ ಸಂಚಾರಿಗಳ ದೃಷಿಯಿಂದ ಇನ್ನೂ ನಾಲ್ಕು ಗಡಿಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಈಗ ಪ್ರತಿದಿನ 2 ಸಾವಿರ ಸ್ವಾಬ್ ಟೆಸ್ಟ್ ನಡೆಯುತ್ತಿದೆ. ಇದನ್ನು 4 ಸಾವಿರಕ್ಕೆ ಹೆಚ್ಚಳಗೊಳಿಸಲಾಗುವುದು. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಇದಕ್ಕೆ ಡಾಟಾ ಎಂಟ್ರಿ ಆಪರೇಟರ್ ಹಾಗೂ ಲ್ಯಾಬ್ ಟೆಕ್ನಿಶಿಯನ್ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಬ್ ತಪಾಸಣಾ ಕೇಂದ್ರವಿದ್ದು, 24 ಗಂಟೆಯಲ್ಲಿ ಫಲಿತಾಂಶ ನೀಡಲಾಗುತ್ತಿದೆ. ಕೇರಳ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.