ಉಡುಪಿ ನಗರಸಭೆ ಕಸ ಸಂಗ್ರಹ ಕಾರ್ಮಿಕನಿಗೆ ಹಲ್ಲೆ: ಆರೋಪಿಗಳಿಬ್ಬರ ಬಂಧನ
ಉಡುಪಿ, ಮಾ.12: ಕಸದ ವಿಚಾರವಾಗಿ ನಗರಸಭೆಯಿಂದ ಕಸ ಸಂಗ್ರಹ ಮಾಡುವ ಕಾರ್ಮಿಕರೊಬ್ಬರಿಗೆ ಇಲೆಕ್ಟ್ರಾನಿಕ್ಸ್ ಅಂಗಡಿಯವರು ಹಲ್ಲೆ ನಡೆಸಿರುವ ಘಟನೆ ಇಂದು ಮಧ್ಯಾಹ್ನ ವೇಳೆ ನಗರದ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಹಲ್ಲೆಗೊಳಗಾದ ಕಾರ್ಮಿಕನನ್ನು ಬಾಗಲಕೋಟೆ ಮೂಲದ ನಿಟ್ಟೂರು ನಿವಾಸಿ ಸಂಜು ಮಾದರ್ (26) ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳಾದ ನೇಜಾರಿನ ಇಸ್ಮಾಯಿಲ್(55) ಹಾಗೂ ಹೂಡೆಯ ಸುಹೈಲ್ (28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಜು, ಸಿಟಿ ಬಸ್ ನಿಲ್ದಾಣದ ಬಳಿ ಕಸ ಸಂಗ್ರಹಕ್ಕೆ ವಾಹನದೊಂದಿಗೆ ಹೋಗಿದ್ದು, ಅಲ್ಲಿ ಆರೋಪಿಗಳ ಅಂಗಡಿಯಲ್ಲಿ ಹಸಿ ಮತ್ತು ಒಣ ಕಸ ಬೆರೆಸಿರುವುದನ್ನು ಸಂಜು ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಅಂಗಡಿಯವರಿಗೆ ಮತ್ತು ಸಂಜು ಅವರ ಮಧ್ಯೆ ವಾಗ್ವಾದ ನಡೆಯಿತು. ಇದೇ ಸಿಟ್ಟಿನಲ್ಲಿ ಇಸ್ಮಾಯಿಲ್ ಮತ್ತು ಸುಹೈಲ್, ಸಂಜುವಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.