ಏ.ಕೆ.ಕುಕ್ಕಿಲ ಅವರ ಕಾದಂಬರಿ-ಕಥಾಸಂಕಲನ ಬಿಡುಗಡೆ
ಮಂಗಳೂರು, ಮಾ.12: ಪತ್ರಕರ್ತ ಏ.ಕೆ.ಕುಕ್ಕಿಲ ಅವರ ಕಾದಂಬರಿ ‘ವೈರಸ್-ಅವರಿಬ್ಬರೂ ಪರಾರಿಯಾದರು’ ಮತ್ತು ಕಥಾ ಸಂಕಲನ ‘ಅಮ್ಮನ ಕೋಣೆಗೆ ಏ.ಸಿ.’ ಕೃತಿಗಳ ಬಿಡುಗಡೆ ಕಾರ್ಯಕ್ರಮವು ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ಜರುಗಿತು.
ಏ.ಕೆ.ಕುಕ್ಕಿಲ ಅವರ ಸಹೋದರ ಅಬ್ದುರ್ರಹ್ಮಾನ್ ಕುಕ್ಕಿಲ ಕೃತಿಗಳನ್ನು ಬಿಡುಗಡೆಗೊಳಿಸಿದರು. ಕೆಎಂ ಶರೀಫ್ ಮತ್ತು ಡಿ.ಕೆ. ಇಬ್ರಾಹೀಂ ಕೃತಿಗಳ ಪ್ರಥಮ ಪ್ರತಿಯನ್ನು ಸ್ವೀಕರಿಸಿದರು. ಕೃತಿಕಾರ ಏ.ಕೆ.ಕುಕ್ಕಿಲ ಪ್ರಕಟಿತ ಕಾದಂಬರಿ ಮತ್ತು ಕಥೆಗಳ ಹುಟ್ಟು ಹಾಗೂ ಹಿನ್ನಲೆಯ ಬಗ್ಗೆ ವಿವರಿಸಿದರು.
ಕೃತಿಗಳ ಬಗ್ಗೆ ಮಾತನಾಡಿದ ವಿಮರ್ಶಕ ಅರವಿಂದ ಚೊಕ್ಕಾಡಿ ‘ಈ ಕಾದಂಬರಿ ಮತ್ತು ಕಥೆಗಳು ತುಂಬಾ ಆಪ್ತವಾದುದು. ಗ್ರಾಮೀಣ ಜನರ ಸಾಮಾಜಿಕ ಬದುಕನ್ನು ಚೆನ್ನಾಗಿ ತೆರೆದಿಡಲಾಗಿದೆ. ಒಬ್ಬ ಲೇಖಕ ವರ್ತಮಾನದ ಬದುಕಿಗೆ ಹೇಗೆ ಸ್ಪಂದಿಸು ತ್ತಾನೆ ಮತ್ತು ತಾತ್ವಿಕತೆಯನ್ನು ಹೇಗೆ ರೂಪಿಸುತ್ತಾನೆ ಎಂಬುದು ಮುಖ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಲೇಖಕನಿಗೆ ಸಿದ್ಧಾಂತಗಳು ಸವಾಲಾಗಿ ಪರಿಣಮಿಸಿವೆ. ಬರೆಹಗಳು ಸಮಾಜಕ್ಕೆ ಬೆಳಕಾಗಬೇಕೇ ವಿನಃ ಕಣ್ಣಿಗೆ ಧೂಳಾಗಬಾರದು. ಹೊಲಿಯುವ ಸೂಜಿ-ನೂಲಾಗಿರಬೇಕೇ ವಿನಃ ಕತ್ತರಿಯಾಗಬಾರದು. ಈ ನಿಟ್ಟಿನಲ್ಲಿ ಕೃತಿಕಾರ ಏ.ಕೆ.ಕುಕ್ಕಿಲ ತುಂಬಾ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ಕಾದಂಬರಿಯ ಕಥಾವಸ್ತು ವಾಸ್ತವ ಅಲ್ಲ. ಆದರೆ ವಾಸ್ತವವಾದರೆ ಎಷ್ಟು ಚೆನ್ನ ಎಂಬ ಕನಸನ್ನು ಕೃತಿಕಾರ ಕಾಣು ತ್ತಾರೆ. ಅಲ್ಲದೆ ಇಲ್ಲಿನ ಪಾತ್ರಗಳೆಲ್ಲಾ ಆದರ್ಶಮಯವಾಗಿದೆ ಎಂದು ಹೇಳಿದರು.
ಬಿಳಿಚುಕ್ಕೆ ಪ್ರಕಾಶನದ ಅಧ್ಯಕ್ಷ ಎಸ್.ಎಂ.ಮುತ್ತಲಿಬ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕವಿ ಶರೀಫ್ ನಿರ್ಮುಂಜೆ ಪ್ರಾರ್ಥನಾ ಗೀತೆ ಹಾಡಿದರು. ಕವಿ ಬಿಎ ಮುಹಮ್ಮದಲಿ ಕಮ್ಮರಡಿ ಕಾರ್ಯ ಕ್ರಮ ನಿರೂಪಿಸಿದರು.
ಬಹುಭಾಷಾ ಕವಿಗೋಷ್ಠಿ : ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಬಶೀರ್ ಅಹ್ಮದ್ ಕಿನ್ಯ, ಶರೀಫ್ ನಿರ್ಮುಂಜೆ, ಶಂಶಾದ್, ಕವನ ವಾಚಿಸಿದರು. ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.