ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಫೆಲೆಸ್ತೀನಿ ಮಕ್ಕಳನ್ನು ಅಕ್ರಮ ವಶಪಡಿಸಿಕೊಂಡ ಇಸ್ರೇಲಿ ಪಡೆಗಳು

Update: 2021-03-13 07:13 GMT
photo: twitter

ಜೆರುಸಲೆಂ:  ಇಸ್ರೇಲಿ ಪಡೆಗಳು ಬುಧವಾರ  ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶದ ಹೆಬ್ರೋನ್ ಎಂಬಲ್ಲಿ ಐದು ಮಂದಿ ಫೆಲೆಸ್ತೀನಿ ಮಕ್ಕಳನ್ನು  ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ವಶಪಡಿಸಿಕೊಂಡು ನಂತರ ಹಲವು ಗಂಟೆಗಳ ವಿಚಾರಣೆ ಬಳಿಕ ಬಿಡುಗಡೆಗೊಳಿಸಿವೆ ಎಂದು ತಿಳಿದು ಬಂದಿದೆ. ಶಸ್ತ್ರಸಜ್ಜಿತ ಇಸ್ರೇಲಿ ಸೈನಿಕರು 8ರಿಂದ 13 ವರ್ಷ ಪ್ರಾಯದ ಮಕ್ಕಳನ್ನು ಹತ್ತಿರದ ಪೊಲೀಸ್ ಠಾಣೆಗೆ ಎಳೆದೊಯ್ಯುತ್ತಿರುವ ವೀಡಿಯೋವನ್ನು ಇಸ್ರೇಲಿ ಮಾನವ ಹಕ್ಕುಗಳ ಸಂಘಟನೆ ಬಿʼಟಿಸೆಲೆಂ ಬಿಡುಗಡೆಗೊಳಿಸಿದೆ.

ಈ ಮಕ್ಕಳ ಪೈಕಿ 12 ಹಾಗೂ 13 ವರ್ಷ ಪ್ರಾಯದ ಇಬ್ಬರು ಮಕ್ಕಳನ್ನು ಮತ್ತೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇಸ್ರೇಲಿ ಕಾನೂನಿನ ಪ್ರಕಾರ 12 ವರ್ಷ ಮೇಲ್ಪಟ್ಟ ಮಕ್ಕಳು ಕಾನೂನಿನಡಿಯಲ್ಲಿ ವಯಸ್ಕರಂತೆಯೇ ಪರಿಗಣಿಸಲ್ಪಡುತ್ತಾರೆ.

'ಅತಿಕ್ರಮಣ' ಆರೋಪ ಕುರಿತ ತನಿಖೆಗಾಗಿ ಮಕ್ಕಳನ್ನು ವಶಪಡಿಸಿಕೊಂಡಿದ್ದಾಗಿ ಇಸ್ರೇಲಿ ಪಡೆಗಳು ಹೇಳಿಕೊಂಡಿವೆ. ಮಕ್ಕಳು ಆ ಪ್ರದೇಶದಲ್ಲಿ ಆಟವಾಡುತ್ತಾ ಕೆಲ ಕಾಡು ಗಿಡಗಳನ್ನು ಸಂಗ್ರಹಿಸುತ್ತಿರುವಾಗ ಅಲ್ಲಿನ ಕೆಲ ಜನರು ಮಕ್ಕಳನ್ನು ಅಲ್ಲಿಂದ ಓಡಿಸಿ ನಂತರ ಇಸ್ರೇಲಿ ಪಡೆಗಳಿಗೆ ಮಾಹಿತಿ ನೀಡಿದ್ದರು. ಮಕ್ಕಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರು ಅಕ್ರಮ ವಾಸಿಗಳು ಎನ್ನಲಾಗಿದ್ದು ಅವರು ಫೆಲೆಸ್ತೀನಿ ಗ್ರಾಮ ಮಸಾಫೆರ್ ಯಟ್ಟಾ ಸಮೀಪದ ಹೆವೊಟ್ ಮಾವೊನ್ ಎಂಬ ಪ್ರದೇಶದವರು ಎನ್ನಲಾಗಿದೆ.

ಘಟನೆ ನಡೆದ ದಿನದಂದೇ ಅಕ್ರಮ ವಾಸಿಗಳು ಇಬ್ಬರು ಫೆಲೆಸ್ತೀನಿ ಮಕ್ಕಳು ಅಲ್ಲಿ ಆಡುಗಳನ್ನು ಮೇಯಿಸುತ್ತಿರುವಾಗ ಅವರತ್ತ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿಯಿದೆ.

ಫೆಲೆಸ್ತೀನಿ ಮಕ್ಕಳನ್ನು ಇಸ್ರೇಲಿ ಪಡೆಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿರುವುದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಹಲವು ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News