ದುಬೈಯಲ್ಲಿ ನಿಧನರಾದ ಮುತ್ತಲಿಬ್ ನಾರ್ಶ ಅಂತ್ಯ ಸಂಸ್ಕಾರ ನೆರವೇರಿಸಿದ ಯುಎಇ ಕೆಸಿಎಫ್

Update: 2021-03-13 10:14 GMT

ದುಬೈ: ಕಳೆದ ತಿಂಗಳು ಫೆಬ್ರವರಿ 11 ರಂದು ದುಬೈಯಲ್ಲಿ ಹೃದಯಾಘಾತದಿಂದ ನಿಧನರಾದ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾರ್ಶದ ಮುತ್ತಲಿಬ್ (34)  ಮೃತದೇಹವನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಸಮಿತಿ ಮಾ.11 ರಂದು ಅಂತ್ಯಸಂಸ್ಕಾರ ನೆರವೇರಿಸಿದೆ.

ಘಟನೆಯ ವಿವರ

ಕಳೆದ ಫೆಬ್ರವರಿ 11 ರಂದು ದುಬೈಯಲ್ಲಿ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತರಾಗುತ್ತಾರೆ. ಕುಟುಂಬದಿಂದಲೂ, ಬಂಧು ಬಳಗದಿಂದಲೂ ಸಂಪೂರ್ಣ ಸಂಪರ್ಕ ಕಡಿದುಕೊಂಡಿದ್ದ ಈ ವ್ಯಕ್ತಿಯ ಮರಣವು ಯಾರ ಗಮನಕ್ಕೂ ಬಂದಿರಲಿಲ್ಲ. ತಿಂಗಳು ಕಳೆದರೂ ಸಂಬಂಧಪಟ್ಟವರ‌್ಯಾರೂ ಸಂಪರ್ಕಿಸದ ಹಿನ್ನೆಲೆಯಲ್ಲಿ ಮೂರು ದಿವಸಗಳ ಹಿಂದೆ ಯುಎಇ ಭಾರತೀಯ ರಾಯಭಾರಿ ಕಚೇರಿಯು ಕೆಸಿಎಫ್ ಯುಎಇ ಸಮಿತಿಯನ್ನು ಕರೆದು ಗುರುತು ಪರಿಚಯವಿಲ್ಲದ ಭಾರತೀಯ ಮೂಲದ ಅನಾಥ ಮೃತದೇಹವೊಂದು ಸುಮಾರು ದಿನದಿಂದ ಶವಗಾರದಲ್ಲಿ ಬಾಕಿಯಾಗಿದೆಯೆಂಬ ಮಾಹಿತಿಯನ್ನು ನೀಡುತ್ತದೆ.

ತಕ್ಷಣ ಕಾರ್ಯ ಪ್ರವೃತ್ತರಾದ ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಕೊಡಗು ಮತ್ತು ವೆಲ್ಫೇರ್ ವಿಭಾಗದ ಅಧ್ಯಕ್ಷ ಝೈನುದ್ದೀನ್ ಬೆಳ್ಳಾರೆ ನೇತೃತ್ವದಲ್ಲಿ ದುಬೈ ನಾರ್ತ್ ಝೋನ್ ಕೆಸಿಎಫ್ 24/7 ಸನ್ನದ್ಧ ತಂಡದ ಕಾರ್ಯಕರ್ತರನ್ನು ಮೂರು ತಂಡಗಳಾಗಿ ವಿಂಗಡಿಸಿ ಕಾರ್ಯ ಪ್ರವೃತ್ತರಾಗುತ್ತಾರೆ.

ಆದರೆ ಮೃತರ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಯಾವ ಐಡೆಂಟಿಟಿಯೂ ಸಿಗದ ಕಾರಣ ಗುರುತು ಪತ್ತೆ ಹಚ್ಚಲು ಕೆಸಿಎಫ್ ಹರಸಾಹಸ ಪಡುತ್ತದೆ.

ಕೆಸಿಎಫ್ ದುಬೈ ನಾರ್ತ್ ಝೋನಿನ ಮಜೀದ್ ಮಂಜನಾಡಿ ಮತ್ತು ಅಲಿ ಕೂಳೂರು ನೇತೃತ್ವದ ತಂಡ ಪೋಲಿಸ್ ಇಲಾಖೆ, ವೈದ್ಯಕೀಯ ದಾಖಲೆ ಮತ್ತು ಇಂಡಿಯನ್ ಕನ್ಸುಲೇಟ್ ಗಳಲ್ಲಿ ಸಂಪರ್ಕಿಸಿ,  ನಿರಂತರ ಪ್ರಯತ್ನದ ಫಲವಾಗಿ ಮೃತರು ಬಂಟ್ವಾಳ ತಾಲೂಕಿನ ಮುತ್ತಲಿಬ್ ಎಂದು ಖಚಿತಪಡಿಸಿ ಅಗತ್ಯ ದಾಖಲೆಗಳನ್ನು ಸಿದ್ದಪಡಿಸುತ್ತಾರೆ.

ಆದರೆ ಪಾಸ್‌ಪೋರ್ಟ್ ವೀಸಾ ಸೇರಿದಂತೆ ಯಾವ ದಾಖಲೆಗಳೂ ಇಲ್ಲದ ಕಾರಣ ದುಬೈ ಸರ್ಕಾರದ ನೀತಿ ನಿಯಮಾವಳಿ ಯನುಸಾರ ಮೃತರ ಅಂತ್ಯಸಂಸ್ಕಾರಕ್ಕೆ ತೊಡಕಾಗುತ್ತದೆ. ಅಲ್ಲೂ ಕಾರ್ಯಪ್ರವೃತ್ತರಾದ ಕೆಸಿಎಫ್ ಶತಾಯಗತಾಯ ಪ್ರಯತ್ನಿಸಿ ಊರಿನಲ್ಲಿರುವ ಕೆಸಿಎಫ್ ಸೌದಿ ಅರೇಬಿಯಾ ಅಧ್ಯಕ್ಷರಾದ ಯೂಸುಫ್ ಸಖಾಫಿ ಬೈತಾರ್ ಮತ್ತು ಕುಟುಂಬಸ್ಥರ ಸಹಕಾರದೊಂದಿಗೆ ಪವರ್ ಆಫ್ ಅಟಾರ್ನಿ ಪಡೆದು ಕೆಸಿಎಫ್ ಸಂಬಂಧಿತ ವ್ಯಕ್ತಿಗಳ ಹೆಸರಿನಲ್ಲಿ ಪಾಸ್‌ಪೋರ್ಟ್‌ ಮತ್ತಿತರ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ದುಬೈಯ ಅಲ್ ಕೂಜ್ ಖಬರ್ ಸ್ಥಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಕೆಸಿಎಫ್ ದುಬೈ ಸೌತ್ ಝೋನ್ ಕೋಶಾಧಿಕಾರಿಯೂ, ಅಲ್ ಬರ್ಶಾ ಮಸ್ಜಿದ್ ಇಮಾಮರೂ ಆಗಿರುವ ಇಲ್ಯಾಸ್ ಮದನಿ ನೇತೃತ್ವದಲ್ಲಿ ದಫನ್ ಕಾರ್ಯದ ನೇತೃತ್ವ ವಹಿಸಿದ್ದರು, ಈ ಸಂದರ್ಭ ದುಬೈ ಸೌತ್ ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಅಹ್ಸನಿ, ಸಾಂತ್ವನ ವಿಭಾಗ ಕಾರ್ಯದರ್ಶಿ ಮನ್ಸೂರ್ ಹರೇಕಳ, ಶರೀಫ್ ಬೈರಿಕಟ್ಟೆ ಮುಂತಾದವರು ಜೊತೆಗಿದ್ದು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News