×
Ad

ಪ್ರವರ್ಗ 2(ಎ)ಗೆ ಬಲಿಷ್ಠ ಸಮುದಾಯ ಸೇರಿಸಿದರೆ ಹೋರಾಟ : ಮುಖ್ಯಮಂತ್ರಿ ಚಂದ್ರು

Update: 2021-03-13 15:48 IST

ಮಂಗಳೂರು, ಮಾ.13: ಸಮಾಜದ ವಿವಿಧ ಹಿಂದುಳಿದವರಿರುವ ಪ್ರವರ್ಗ 2 (ಎ)ಗೆ ಬಲಿಷ್ಠ ಸಮುದಾಯವನ್ನು ಸೇರಿಸುವಂತಹ ಪ್ರಯತ್ನಕ್ಕೆ ಸರಕಾರ ಮುಂದಾಗಬಾರದು. ಒಂದು ವೇಳೆ ಸರಕಾರ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಹೋರಾಟ ಮಾಡು ವುದು ಅನಿವಾರ್ಯವಾದೀತು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವರ್ಗ 2(ಎ)ನಲ್ಲಿ ಪ್ರಸ್ತುತ 102 ಅತಿ ಹಿಂದುಳಿದ ಜಾತಿಗಳಿವೆ, ವೀರಶೈವ ಪಂಚಮಸಾಲಿ ಸಮುದಾಯ ಮತ್ತಿತರ ಕೆಲವು ಪ್ರಭಾವಿ ಸಮುದಾಯಗಳು ಈ ಪ್ರವರ್ಗಕ್ಕೆ ತಮ್ಮನ್ನು ಸೇರಿಸುವಂತೆ ಸರಕಾರೆದ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ. ಸರಕಾರ ಕೂಡ ಈ ಸಮುದಾಯದ ಮುಖಂಡರ ಮಾತಿಗೆ ಮಣಿಯಬಾರದು ಎಂದು ಆಗ್ರಹಿಸಿದರಲ್ಲದೆ ಈಗಾಗಲೇ ನಡೆಸಿರುವ ಜಾತಿವಾರು ಸಮೀಕ್ಷೆಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆಮಾಡಬೇಕು. ಆ ಮೂಲಕ ಜಾತಿ ಆಧಾರಿತ ಮೀಸಲಾತಿಗೆ ಕ್ರಮ ಜರುಗಿಸಬೇಕು ಎಂದರು.

ಅತ್ಯಂತ ದುರ್ಬಲ ಮತ್ತು ಅಸಹಾಯಕ ಸಮುದಾಯಗಳನ್ನು ರಕ್ಷಿಸಬೇಕಾಗಿರುವುದು ಸರಕಾರಗಳ ಕರ್ತವ್ಯವಾಗಿದೆ. ಆಡಳಿತ, ಭೂಮಿ, ಮಠ, ಮೆಡಿಕಲ್, ಇಂಜಿನಿಯರಿಂಗ್ ಮತ್ತಿತರ ಪ್ರಬಲ ಶಿಕ್ಷಣ ಸಂಸ್ಥೆ, ಬಲಿಷ್ಠ ನಾಯಕತ್ವ, ಪ್ರಭಾವಿ ಜಗದ್ಗುರುಗಳನ್ನು ಹೊಂದಿರುವವರು, ಸಂಖ್ಯಾಬಲ, ಸಂಘಟನೆಯಿಂದ ಬಲಿಷ್ಠರಾದವರು ಅಸಹಾಯಕ ಸಮುದಾಯಗಳ ಅನ್ನವನ್ನು ಕಸಿಯಲು ಹೊರಟಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಸ್ತಿತ್ವ ದಲ್ಲಿರುವಾಗ ಮತ್ತು ಮೀಸಲಾತಿ ಗೊಂದಲದ ಬಗ್ಗೆ ಮತ್ತೊಂದು ಉನ್ನತ ಮಟ್ಟದ ಸಮಿತಿಯನ್ನು ಸರಕಾರ ಮಾಡಲು ಹೊರಟಿರುವುದು ಅಕ್ಷಮ್ಯ. ಈಗಿನ ಮೀಸಲಾತಿ ಗೊಂದಲವನ್ನು ಆಯೋಗವೇ ಪರಿಹರಿಸಬೇಕು. ಈಗಾಗಲೆ ಆಯೋಗವು ಮಾ.24ರಂದು ಈ ಬಗ್ಗೆ ಮಾತುಕತೆಗೆ ಜಾಗೃತ ವೇದಿಕೆಗೆ ಆಹ್ವಾನ ನೀಡಿದೆ. ನಾವು ನಮ್ಮ ಅಹವಾಲುಗಳನ್ನು ಮಂಡಿಸುವೆವು ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಸಮೀಕ್ಷೆ ಪ್ರಕಟಿಸಿ

ಹಿಂದುಳಿದ ವರ್ಗಗಳ ಆಯೋಗ ಕೈಗೊಂಡ ಜಾತಿವಾರು ಸಮೀಕ್ಷೆಗೆ ನೂರಾರು ಕೋಟಿ ರೂ. ವೆಚ್ಚ ಮಾಡಲಾಗಿದೆ. ಸಮೀಕ್ಷೆಯ ವರದಿಯನ್ನು ಪ್ರಕಟಿಸಿ, ಸಾರ್ವಜನಿಕವಾಗಿ ಚರ್ಚೆಗೆ ಬಿಟ್ಟು ಆಯೋಗ ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನಃಪರಿಶೀಲಿಸಿ ಪರಿಷ್ಕೃತ ಪಟ್ಟಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ ಮುಖ್ಯಮಂತ್ರಿ ಚಂದ್ರು ಒಂದು ವೇಳೆ ಸರಕಾರ ಬಲಿಷ್ಠರ ನ್ಯಾಯಬದ್ಧವಲ್ಲದ ಒತ್ತಾಯಕ್ಕೆ ಮಣಿದರೆ ಅತಿ ಹಿಂದುಳಿದ ವರ್ಗದ 102 ಜಾತಿವರ್ಗಗಳು ಸಂಘಟಿತವಾಗಿ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಹರಿನಾಥ್, ವೇದಿಕೆಯ ಮುಖಂಡರಾದ ಪ್ರಕಾಶ್ ಸಾಲಿಯಾನ್, ಪದ್ಮನಾಭ ಅಮೀನ್, ವಿಶ್ವಾಸ್ ಕುಮಾರ್‌ದಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News