×
Ad

ಪರಿಸರವಾದಿ ಸುರೇಶ್ ಶೆಟ್ಟಿ ಜೆಪ್ಪು ನಿಧನ

Update: 2021-03-13 17:03 IST

ಮಂಗಳೂರು, ಮಾ.13: ಪರಿಸರವಾದಿ, ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ, ಸಾಮಾಜಿಕ ಹೋರಾಟಗಾರ ಎ. ಸುರೇಶ್ ಶೆಟ್ಟಿ (72) ಉಡುಪಿ ಜಿಲ್ಲೆಯ ಕಾಪು ಸಮೀಪ ಹೃದಯಾಘಾತದಿಂದ ಶನಿವಾರ ನಿಧನರಾದರು.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ನಗರದ ಜೆಪ್ಪು ಮಾರ್ಕೆಟ್ ಸಮೀಪದ ನಿವಾಸಿಯಾಗಿದ್ದ ಸುರೇಶ್ ಶೆಟ್ಟಿ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದರೂ ಕೂಡ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಮಂಗಳೂರು ದಕ್ಷಿಣ ಬ್ಲಾಕ್‌ನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಎರಡು ಅವಧಿಗೆ ಸೇವಾದಳದ ಮುಖ್ಯ ಸಂಘಟಕರಾಗಿದ್ದರು. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.

ಶನಿವಾರ ಬೆಳಗ್ಗೆ ಪತ್ನಿಯೊಂದಿಗೆ ಕಾಪು ಕಡೆ ತೆರಳಿದ್ದರು. ಈ ಸಂದರ್ಭ ಹೃದಯಾಘಾತಕ್ಕೀಡಾಗಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಗಲೇ ಅವರು ಕೊನೆಯುಸಿರೆಳೆದಿರುವ ಬಗ್ಗೆ ವೈದ್ಯರು ಘೋಷಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡರು, ದ.ಕ. ಜಿಪಂ ಮಾಜಿ ಅಧ್ಯಕ್ಷ ಸದಾನಂದ ಪೂಂಜಾ ಹಾಗೂ ದ.ಕ. ಜಿಲ್ಲಾ ಸೇವಾದಳದ ಮುಖ್ಯಸ್ಥ ಸುರೇಶ್ ಶೆಟ್ಟಿ ಅವರ ನಿಧನಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

ದೀರ್ಘ ಕಾಲ ಪಕ್ಷದಲ್ಲಿ ಕಾರ್ಯ ನಿರ್ವಹಿಸಿ ಜಿಲ್ಲೆಯಲ್ಲಿ ಜನಾನುರಾಗಿಯಾಗಿದ್ದ ಸದಾನಂದ ಪೂಂಜಾ ಹಾಗೂ ಸುರೇಶ್ ಶೆಟ್ಟಿ ಅವರು ವಿಧಿವಶರಾದ ಸುದ್ದಿ ನೋವು ತಂದಿದ್ದು, ಜಿಲ್ಲಾ ಕಾಂಗ್ರೆಸ್ ಗೆ ತುಂಬಲಾರದ ನಷ್ಟ. ಸಮಾಜದ ಎಲ್ಲ ವರ್ಗದ ಜನರ ಸರ್ವಾಂಗೀಣ ಏಳಿಗೆಗೆ ಶ್ರಮಿಸಿದ ಇವರಿಬ್ಬರ ನಿಧನದಿಂದ ಸಜ್ಜನ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ಯು.ಟಿ. ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ಮುಹಮ್ಮದ್ ಮಸೂದ್, ವಸಂತ್ ಬಂಗೇರಾ, ಐವನ್ ಡಿಸೋಜ, ಮೊಯ್ದಿನ್ ಬಾವಾ, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಮಿಥುನ್ ರೈ, ಹಾಜಿ ಕೋಡಿಜಾಲ್ ಇಬ್ರಾಹೀಂ, ಕಣಚೂರ್ ಮೋನು, ತಾಪಂ ಅಧ್ಯಕ್ಷ ಮಲಾರ್ ಮೋನು, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಕವಿತಾ ಸನಿಲ್, ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಡಾ.ಶಕೀಲ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ನಝೀರ್ ಬಜಾಲ್, ಶಾಲೆಟ್ ಪಿಂಟೊ, ಬ್ಲಾಕ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲಿಯಾನ್, ಸದಾಶಿವ ಶೆಟ್ಟಿ, ಸುರೇಂದ್ರ ಕಂಬಳಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಎನ್.ಎಸ್ ಕರೀಂ, ಮುಹಮ್ಮದ್ ಕುಂಜತ್ತಬೈಲ್, ಸಂತೋಷ್ ಕುಮಾರ್ ಶೆಟ್ಟಿ, ಶಬ್ಬೀರ್ ಎಸ್., ಯು.ಬಿ. ಸಲೀಂ, ಬಿ.ಎಚ್. ಖಾದರ್, ನೀರಜ್ ಚಂದ್ರಪಾಲ್, ಟಿ.ಕೆ. ಸುಧೀರ್, ಶುಭೋದಯ ಆಳ್ವ ಮತ್ತಿತರರು ಪ್ರಕಟನೆಯಲ್ಲಿ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News