ಮಂಗಳೂರು: ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ
Update: 2021-03-13 17:22 IST
ಮಂಗಳೂರು, ಮಾ.13: ಬಜ್ಪೆ-ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 33,75,470 ರೂ. ಮೌಲ್ಯದ 737 ಗ್ರಾಂ ಚಿನ್ನ ಅಕ್ರಮ ಸಾಗಾಟವನ್ನು ಪತ್ತೆ ಮಾಡಿದ್ದಾರೆ.
ದುಬೈನಿಂದ ಆಗಮಿಸಿದ್ದ ಕೇರಳದ ಕೊಪ್ಪ ನಿವಾಸಿ ಖಾಲಿದ್ (45) ಎಂಬಾತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ ಚಿನ್ನವಿಟ್ಟು ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಚಿನ್ನ ಸಾಗಾಟ ಮಾಡಲೆಂದು ಖಾಲಿದ್ ಒಳ ಉಡುಪನ್ನು ವಿಶೇಷವಾಗಿ ವಿನ್ಯಾಸ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಡೆಪ್ಯುಟಿ ಕಮಿಷನರ್ ಅವಿನಾಶ್ ಕಿರಣ್ ರೊನ್‌ಗಾಲಿ, ಸೂಪರಿಟೆಂಡೆಂಟ್‌ಗಳಾದ ಭೋಂಕಾರ್, ರಾಕೇಶ್ ಕುಮಾರ್, ಬಿಕ್ರಮ್ ಚಕ್ರವರ್ತಿ ಪಾಲ್ಗೊಂಡಿದ್ದರು.