×
Ad

ಜನಪ್ರಿಯ ಕತೆ-ಕಾದಂಬರಿಯಿಂದಲೇ ಜನಜೀವನದ ನಾಡಿಮಿಡಿತ ಅರಿವು : ಪ್ರೊ.ಬಿ.ಎ.ವಿವೇಕ ರೈ

Update: 2021-03-13 20:32 IST

ಉಡುಪಿ, ಮಾ.13: ಕನ್ನಡದ ಜನಪ್ರಿಯ ಕತೆ-ಕಾದಂಬರಿಕಾರರು ಹಾಗೂ ಮಹಿಳಾ ಸಾಹಿತಿಗಳನ್ನು ನಮ್ಮ ವಿಮರ್ಶಾವಲಯ ಕಡೆಗಣಿಸಿದೆ. ಆದರೆ ನಮ್ಮ ಜನಜೀವನದ ನಾಡಿ ಮಿಡಿತ-ತುಡಿತಗಳು, ತುಮುಲ-ಸಂಘರ್ಷಗಳು ಗೊತ್ತಾಗುವುದು ಇಂಥ ಕತೆ,ಕಾದಂಬರಿಗಳಲ್ಲಿ ಎಂದು ಕನ್ನಡ-ತುಳು ವಿದ್ವಾಂಸ, ಹಂಪಿ ಕನ್ನಡ ವಿವಿಯ ಮಾಜಿ ಕುಲಪತಿ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಪ್ರೊ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್(ಮಾಹೆ) ಮಣಿಪಾಲ, ಮಹಾತ್ಮಗಾಂಧಿ ಸ್ಮಾರಕ ಕಾಲೇಜು ಉಡುಪಿ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡದ ಖ್ಯಾತ ಸಾಹಿತಿ, ಲೇಖಕ, ಶಿಕ್ಷಣ ತಜ್ಞ ಕೆ.ಟಿ.ಗಟ್ಟಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆ.ಟಿ.ಗಟ್ಟಿ ಅವರು ಕತೆ, ಕಾದಂಬರಿಗಳು ಸೇರಿದಂತೆ 90ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದು, ಇವುಗಳಲ್ಲಿ ಮಕ್ಕಳ ಸಾಹಿತ್ಯಗಳು, ತುಳು ಕೃತಿಗಳೂ ಸೇರಿವೆ ಎಂದರು.

ಭಾರತ ಹಾಗೂ ಇಥಿಯೋಪಿಯಾಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಸಿರುವ ಗಟ್ಟಿ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಮೂಲ್ಯವಾದ ಕೃತಿಗಳನ್ನು ನೀಡಿದ್ದಾರೆ. ಗಟ್ಟಿ ಅವರು ಬರವಣಿಗೆಯ ವಿವಿಧ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿ ಕೊಂಡಿದ್ದಾರೆ. ಹೀಗಾಗಿ ಕತೆ, ಕಾದಂಬರಿಗಳೊಂದಿಗೆ ಭಾಷಾ ವಿಷಯಗಳ ಕುರಿತೂ ಅವರಿಗೆ ವೌಲ್ಯಯುತ ಕೃತಿ ನೀಡಲು ಸಾಧ್ಯವಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ಟಿ.ಗಟ್ಟಿ, ನಾನು ಬರೆದಿರುವುದನ್ನು ಓದುಗರು ಸರಿಯಾಗಿ ಗ್ರಹಿಸಬೇಕು. ಇಲ್ಲದಿದ್ದರೆ ನಾನು ಬರೆದಿರುವುದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಮನುಷ್ಯನಲ್ಲಿರುವ ಗುಣಮುಖ್ಯವೇ ಹೊರತು ಜಾತಿ ಅಥವಾ ಧರ್ಮವಲ್ಲ. ಜಾತಿಯ ಕಾರಣಕ್ಕೆ ಯಾರಿಗೇ ಆದರೂ ವಿಶೇಷ ಸ್ಥಾನಮಾನ, ಗೌರವ ನೀಡುವುದನ್ನು ನಾನು ಒಪ್ಪುವುದಿಲ್ಲ ಎಂದರು. ವಯಸ್ಸಿನ ಕಾರಣ ದೈಹಿಕ ತೊಂದರೆಗಳಿದ್ದು, ಅವಕಾಶ ಸಿಕ್ಕಿದರೆ ನಾನು ಮುಂದೆಯೂ ಬರೆಯುತ್ತೇನೆ ಎಂದರು.

ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರು ಅಭಿನಂದನಾ ಭಾಷಣ ಮಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಕೆ.ಟಿ.ಗಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಬೇಕು. ಕೆ.ಟಿ.ಗಟ್ಟಿ ಅವರು ಭಾರತ ಮತ್ತು ಇಥಿಯೋಪಿಯಾದ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಮಾಜಕ್ಕೂ ಪಾಠ ಮಾಡಿದ್ದಾರೆ. ಅವರು ಸುಧಾರಣಾವಾದಿ ಶಿಕ್ಷಣ ಚಿಂತಕ. ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆಯತ್ತ ಒಯ್ದವರು ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ ನಾಯ್ಕಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಮನೋರಮಾ ಎಂ.ಭಟ್, ಮುಳಿಯ ರಾಘವಯ್ಯ ಹಾಗೂ ಮುಳಿಯ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ವಂದಿಸಿದರೆ, ನಿವೃತ್ತ ಪ್ರಾಧ್ಯಾಪಕ ಡಾ.ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News