×
Ad

ಮಧ್ವ ಸರೋವರದ ಮಧ್ವ ಗುಡಿ ನವೀಕರಣ

Update: 2021-03-13 20:34 IST

ಉಡುಪಿ, ಮಾ.13: ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಕೃಷ್ಣ ಮಠದಲ್ಲೀಗ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತಿದ್ದು, ಇದೀಗ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ಮಧ್ವ ಸರೋವರದ ಮಧ್ಯ ದಲ್ಲಿರುವ ಮಧ್ವ ಗುಡಿಯ ನವೀಕರಣ ಕಾರ್ಯ ಆರಂಭವಾಗಿದೆ ಎಂದು ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀರ್ಣಗೊಂಡಿರುವ ಮಧ್ವ ಗುಡಿಯ ಮಾಡನ್ನು ತೆಗೆದು, ತಾಮ್ರದ ತಗಡನ್ನು ಮಾಡಿಗೆ ಹೊದಿಸಲಾಗುವುದು. ಅದೇ ರೀತಿ ಸರೋವರದ ಎದುರು ಭಾಗದ ಮಾಡಿನ ನವೀಕರಣ ಕಾರ್ಯವೂ ಅಂದಾಜು 15 ಲಕ್ಷ ರೂ.ವೆಚ್ಚದಲ್ಲಿ ನಡೆಯುತ್ತಿದೆ ಎಂದರು.

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮಠದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಠದ ಪೈಂಟಿಂಗ್, ಎಲೆಕ್ಟ್ರಿಕಲ್ ಹಾಗೂ ಇತರ ಕಾಮಗಾರಿಯನ್ನು ಒಟ್ಟು ರೂ. 31.88 ಲಕ್ಷ ವೆಚ್ಚದಲ್ಲಿ ನಡೆಸಲಾಗಿದೆ. ಯಾತ್ರಾರ್ಥಿಗಳ ಸರಣಿ ದರ್ಶನದ ಹಾದಿ ವಿಶ್ವಪಥ ಕಾಮಗಾರಿಗೆ 52.63 ಲಕ್ಷ ರೂ., ಸ್ವರ್ಣ ಛತ್ರದ ನವೀಕರಣಕ್ಕೆ 30 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.

ಸದ್ಯ ಮಠದ ಎಲ್ಲಾ ಸೇವೆಗಳು ಹಿಂದಿನಂತೆ ಪುನರಾರಂಭಗೊಂಡಿವೆ. ದಿನಕ್ಕೆ ಸರಾಸರಿ 8 ರಿಂದ 10 ಸಾವಿರ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ರಜಾ ದಿನದಂದು 12ರಿಂದ 15 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ರಥದ ಗಾಲಿ ಗಳನ್ನು ದೀರ್ಘಕಾಲದವರೆಗೆ ಉಳಿಸುವ ನಿಟ್ಟಿನಲ್ಲಿ ಬುಧವಾರ ಮಾತ್ರ ಬ್ರಹ್ಮರಥೋತ್ಸವ ಸೇವೆ ಇರಲಿದೆ ಎಂದರು.

ಕೃಷ್ಣ ಸೇವಾ ಬಳಗದ ರಾಮಚಂದ್ರ ರಾವ್, ಪ್ರದೀಪ್ ರಾವ್, ಶ್ರೀಗಳ ಆಪ್ತ ಕಾರ್ಯದರ್ಶಿ ರೋಹಿತ್ ತಂತ್ರಿ, ರಮೇಶ್ ಕೆ.ಎಸ್., ಮಾಧವ ಉಪಾಧ್ಯಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News