×
Ad

ಕಸ ವಿಲೇವಾರಿ ಕಾರ್ಮಿಕನ ಮೇಲಿನ ಹಲ್ಲೆಗೆ ವ್ಯಾಪಾಕ ಆಕ್ರೋಶ

Update: 2021-03-13 20:42 IST

ಉಡುಪಿ, ಮಾ.13: ಉಡುಪಿ ನಗರಸಭೆಯ ಕಸ ವಿಲೇವಾರಿಯ ದಲಿತ ಕಾರ್ಮಿಕ ಸಂಜು ಮಾದರ ಮೇಲಿನ ಹಲ್ಲೆಗೆ ವ್ಯಾಪಾಕ ಖಂಡನೆ ವ್ಯಕ್ತವಾಗಿದೆ. ಈ ಮಧ್ಯೆ ಅಂಗಡಿ ಮಾಲಕರಾಗಿರುವ ಉಡುಪಿ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ದಾವೂದ್ ಅಬೂಬಕರ್ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.

ಕಸ ಸಂಗ್ರಹಿಸುವ ಕಾರ್ಮಿಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಒತ್ತಾಯಿಸಿದ್ದಾರೆ.

ಪ್ರಕರಣವನ್ನು ಖಂಡಿಸಿರುವ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಆರೋಪಿಗಳ ಅಂಗಡಿಯ ವಾಣಿಜ್ಯ ಪರವಾನಿಗೆಯನ್ನು ರದ್ದು ಗೊಳಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ನಗರಸಭೆಯನ್ನು ಆಗ್ರಹಿಸಿದ್ದಾರೆ.
ಸೌಹಾರ್ದದ ವಾತಾವರಣವನ್ನು ಕೆಡಿಸುವ ಇಂತಹ ಕೃತ್ಯ ಖಂಡಿನೀಯ. ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅನ್ಯಾಯಕ್ಕೊಳಗಾದ ಸ್ವಚ್ಛತಾ ಸಿಬಂದಿಗೆ ನ್ಯಾಯ ಒದಗಿಸಬೇಕೆಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ಜಿಲ್ಲಾಡಳಿತವನ್ನು ಆಗ್ರಹಿಸುತ್ತದೆ.

ಹಲ್ಲೆ ಪ್ರಕರಣವನ್ನು ಖಂಡಿಸಿರುವ ಸಿಐಟಿಯು ಉಡುಪಿ ತಾಲೂಕು ಸಮಿತಿ ಕಾರ್ಯದರ್ಶಿ ಕವಿರಾಜ್, ಆರೋಪಿಗಳನ್ನು ತಕ್ಷಣ ಬಂಧಿಸಿದ ಪೋಲಿಸ್ ಇಲಾಖೆಯನ್ನು ಅಭಿನಂದಿದ್ದಾರೆ. ಕಾರ್ಮಿಕನ ಮೇಲಿನ ಹಲ್ಲೆ ಖಂಡನೀಯ ವಾಗಿದೆ. ಇಂತಹ ಘಟನೆಗಳು ಜಿಲ್ಲೆಗೆ ಅಪಖ್ಯಾತಿ ತಂದೊಡಿದ್ದು, ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಗಮನವಹಿಸಬೇಕು ಎಂದು ವೆಲ್ಫೇರ್ ಪಾರ್ಟಿಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ಒತ್ತಾಯಿಸಿದ್ದಾರೆ.

ಕಾರ್ಮಿಕರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಆಘಾತಕಾರಿ ಮತ್ತು ಖಂಡನೀಯ. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ, ನಗರಸಭೆ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾ ರ್ಕಾರ್, ಮಾಜಿ ನಗರಸಭಾ ಸದಸ್ಯರಾದ ನಾರಾಯಣ ಕುಂದರ್, ಗಣೇಶ್ ದೊಡ್ಡಣಗುಡ್ಡೆ ಎಸ್ಪಿಯವರನ್ನು ಒತ್ತಾಯಿಸಿದ್ದಾರೆ.

ಮಾ.15ರಂದು ಪ್ರತಿಭಟನೆ: ನಗರಸಭೆ ಕಸವಿಲೇವಾರಿ ಮಾಡುವ ದಲಿತ ಕಾರ್ಮಿಕನ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿ ಉಡುಪಿ ನಗರ ಸಭೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲ ಸುಂದರ ಮಾಸ್ತರ್ ತಿಳಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ನಗರಸಭೆಯ ಎಲ್ಲಾ 35 ವಾರ್ಡಿನ ಕಸವಿಲೇವಾರಿ ಮಾಡುವ ಕಾರ್ಮಿಕರು, ಸ್ವಸಹಾಯ ಗುಂಪಿನ ಸದಸ್ಯರು ಮತ್ತು ಕಸವಿಲೇವಾರಿ ಗುತ್ತಿಗೆದಾರರು ಪಾಲ್ಗೊಳ್ಳಬೇಕೆಂದು. ಮುಂದೆ ಇಂತಹ ಕೃತ್ಯ ನಡೆಯದಂತೆ, ಕಾರ್ಮಿಕರಿಗೆ ರಕ್ಷಣೆ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಾಲಕನಿಂದ ಕ್ಷವೆುಯಾಚನೆ: ‘ನನ್ನ ಅಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯ ಉದ್ಯೋಗಿಯೊಬ್ಬರು ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಅಮಾನವೀಯ ಘಟನೆ ನನ್ನ ಗಮನಕ್ಕೆ ಬಂದಿದ್ದು ಅದಕ್ಕೆ ಕ್ಷಮೆ ನಾನು ಯಾಚಿಸುತ್ತೇನೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ದಾವೂದ್ ಅಬೂಬಕರ್ ತಿಳಿಸಿದ್ದಾರೆ.

ನಾನು ದೇಶದ ಕಾನೂನನ್ನು ಗೌರವಿಸುವವನಾಗಿದ್ದು ಯಾವುದೇ ವ್ಯಕ್ತಿಯೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಹಾಗಾಗಿ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ

ಕಸ ವಿಲೇವಾರಿ ಕಾರ್ಮಿಕನಿಗೆ ಹಲ್ಲೆ ನಡೆಸಿರುವ ಪ್ರಕರಣ ಆರೋಪಿಗಳಾದ ಅಸ್ಮಾ ಕ್ಯಾಸೆಟ್ ಕಾರ್ನರ್‌ನ ಇಸ್ಮಾಯಿಲ್ ಹಾಗೂ ಸೊಹೈಲ್ ಎಂಬವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಲಯ ಮಾ.26ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಆರೋಪಿಗಳಿಬ್ಬರನ್ನು ಇಂದು ಪೊಲೀಸರು ಘಟನಾ ಸ್ಥಳಕ್ಕೆ ಕರೆ ತಂದು ಮಹ ಜರು ಪ್ರಕ್ರಿಯೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗಳ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 323, 504, 506 ಜೊತೆಗೆ 34 ಐಪಿಸಿ, ಕಲಂ:3(1)(ಸಿ), 3(1)(ಆರ್)(ಎಸ್), 3(2)(ವಿ-ಎ) ಎಸ್‌ಸಿಎಸ್‌ಟಿ ಆ್ಯಕ್ಟ್ 1989ರಂತೆ ಪ್ರಕರಣ ದಾಖಲಾಗಿದೆ.          

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News