ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ
ಕೊಣಾಜೆ : ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರ ತಂಡವು ಸರ್ಜಿಕಲ್ ವೆಂಟ್ರಿಕುಲಾರ್ ರೆಸ್ಟೊರೇಷನ್ ಎಂಬ ಕ್ಲಿಷ್ಟಕರವಾದ ಮತ್ತು ಅಪರೂಪವಾದ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.
ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾದ 56 ವರ್ಷದ ಹಾವೇರಿಯ ರೋಗಿಯೊಬ್ಬರನ್ನು ಹೃದ್ರೋಗ ತಜ್ಞರು ತಪಾಸಣೆ ನಡೆಸಿದಾಗ ಆತನಿಗೆ ತೀವ್ರ ತರದ ಹೃದಯ ಸಮಸ್ಯೆಗಳಿರುವುದನ್ನು ಪತ್ತೆ ಹಚ್ಚಲಾಯಿತು. ಆತನ ಹೃದಯವು ಸಹಜ ಸ್ಥಿತಿಗಿಂತಲೂ ಕೆಳಮಟ್ಟದಲ್ಲಿ ಅಂದರೆ ಶೇಖಡಾ 20 ರಷ್ಟು ಮಾತ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಸರಿಪಡಿಸಲು ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಎಂ. ಗೋಪಾಲಕೃಷ್ಣನ್ ಮತ್ತು ಡಾ. ನರೇಶ್ ಚಂದ್ರ ಹೆಗ್ಡೆ ಹೆಚ್. ಹೃದ್ರೋಗ ಅರಿವಳಿಕೆ ತಜ್ಞರಾದ ಡಾ. ಮಂಜುನಾಥ್ ಕಾರ್ನಾಥ್ ಇವರುಗಳನ್ನೊಳಗೊಂಡ ವೈದ್ಯರ ತಂಡವು ಸರ್ಜಿಕಲ್ ವೆಂಟ್ರಿಕುಲಾರ್ ರೆಸ್ಟೊರೇಷನ್ ಎಂಬ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿದೆ.
ಇವರ ತಂಡದೊಂದಿಗೆ ತೀವ್ರ ನಿಗಾ ಘಟಕದ ಮುಖ್ಯಸ್ಥರಾದ ಡಾ. ನರೇಶ್ ರೈ ಹಾಗೂ ತಂಡವು ಜೊತೆಗೂಡಿ ಕಾರ್ಯ ನಿರ್ವಹಿಸಿರುತ್ತಾರೆ. ಈ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ರೋಗಿಯು ಸಹಜ ಸ್ಥಿತಿಗೆ ಮರಳಿದ್ದು, ಚೇತರಿಸಿಕೊಂಡ ಬಳಿಕ ಆಸ್ಪತ್ರೆ ಯಿಂದ ಬಿಡುಗಡೆಯಾಗಿರುತ್ತಾರೆ.
ಇಂತಹ ಖಾಯಿಲೆಯಲ್ಲಿ ಶೇಖಡಾ 70ರಷ್ಟು ಮರಣ ಪ್ರಮಾಣ ಹೊಂದಿರುವುದರಿಂದ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ವಿರಳವಾಗಿ ಮಾಡಲಾಗುತ್ತಿದೆ. ಕೆಲವೇ ಯಶಸ್ವಿ ಶಸ್ತ್ರಚಿಕಿತ್ಸೆಗಳಲ್ಲಿ ಇದು ಕೂಡಾ ಒಂದಾಗಿದ್ದು, ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಿಭಾಯಿಸಲು ಹೃದ್ರೋಗ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ತೀವ್ರಚಿಕಿತ್ಸಾ ವಿಭಾಗದ ತಜ್ಞರು ಮತ್ತು ಅನುಭವಿ ಶುಶ್ರೂಷಾ ಸಿಬ್ಬಂದಿ ಸೇರಿದಂತೆ ಸಮಗ್ರ ವೈದ್ಯರ ತಂಡವನ್ನು ಈ ಆಸ್ಪತ್ರೆಯು ಹೊಂದಿದೆ ಎಂದು ವೈದ್ಯಕೀಯ ಅಧೀಕ್ಷಕರಾಗಿರುವ ಮೇಜರ್ ಡಾ. ಶಿವಕುಮಾರ್ ಹಿರೇಮಠ್ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.