×
Ad

ಕೋಟ : ಜನಪ್ರತಿನಿಧಿಗಳ ಕ್ರೀಡಾಕೂಟ

Update: 2021-03-13 22:37 IST

ಕೋಟ : ಕೋಟ ವಿವೇಕ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆಗಳ ಕೂಟ ‘ಹೊಳಪು’ ಶನಿವಾರ ವೈವಿಧ್ಯಮಯವಾಗಿ ನಡೆಯಿತು.

ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣಕನ್ನಡ ಜಿಲ್ಲೆಗಳ ಒಟ್ಟು 350ಕ್ಕೂ ಹೆಚ್ಚು ಗ್ರಾಪಂ, 2 ಜಿಪಂ, 10ಕ್ಕೂ ಹೆಚ್ಚು ತಾಪಂ, 1 ಮಹಾನಗರ ಪಾಲಿಕೆ, 15 ನಗರಸಭೆ, ಪುರಸಭೆ ಒಟ್ಟು 5 ಸಾವಿರಕ್ಕೂ ಹೆಚ್ಚು ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಆಕರ್ಷಣೀಯ ಪಥಸಂಚಲನ: ಪಥಸಂಚಲನದಲ್ಲಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ, ಯಕ್ಷಗಾನ ಶೈಲಿಯ ಮಹಿಷಾಸುರ, ಡೋಲು ವಾದಕರ ಶೈಲಿ, ಕೇರಳದ ಶೈಲಿಯ ಚಂಡೆವಾದನ, ದೇಶಾಭಿಮಾನ ಬಿತ್ತುವ ಭಾರತನಾರಿ ಹಾಗೂ ಸೈನ್ಯದ ಗತ್ತು, ಕರೋನ ನಿರೋಧಕ ಲಸಿಕೆ, ಕರೋನ ಸೇನಾನಿ, ಕೃಷಿ ಕಾಯಕ, ಕೊಡಗಿನ ಸಾಂಪ್ರದಾಯಿಕ ಉಡುಗೆ ಪೇಟ ಧರಿಸಿದ ದೃಶ್ಯ, ದೇವಳ, ಕೋಟ ರಥೋತ್ಸವ, ಕಂಬಳ ಕೋಣಗಳು, ಡಾ.ಕೆ.ಶಿವರಾಮ ಕಾರಂತರ ಮೂಕಜ್ಜಿಯ ಕನಸು ದೃಶ್ಯಗಳು ಗಮನ ಸೆಳೆದವು.

ಸಂಸದ ನಳಿನ್ ಕುಮಾರ್ ಕಟೀಲ್ ಪಥ ಸಂಚಲನದ ಗೌರವ ಸ್ವೀಕರಿಸಿದರು.
 ಶಾಸಕ ಯು.ಟಿ. ಖಾದರ್ ಕ್ರೀಡಾಜ್ಯೋತಿ ಪ್ರಜ್ವಲಿಸಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್ ಧ್ವಜಾರೋಹಣ ನೆರವೇರಿಸಿದರು. ಮಂಡ್ಯ ಶಾಸಕ ಅಪ್ಪಾಜಿ ಗೌಡ ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪಥ ಸಂಚಲನಕ್ಕೆ ಚಾಲನೆ ನೀಡಿದರು. ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ರೂವಾರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅತ್ಯುತ್ತಮ ಗ್ರಾಮ ಪಂಚಾಯತ್ ಗಳಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಿದರು.

ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ, ಶ್ಯಾಮಲಾ ಕುಂದರ್, ಕಿರಣ್ ಕೊಡ್ಗಿ, ರಾಜು ಪೂಜಾರಿ, ಕೋಟ ವಿವೇಕ ಪಿಯು ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ ಉಪಸ್ಥಿತರಿದ್ದರು.

ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು. ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಶೆಟ್ಟಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News