ಗುರುಪುರ ವಲಯ ರೈತ ಸಮಾವೇಶ
ಗುರುಪುರ, ಮಾ.14 ಬೆಂಗಳೂರಿನಲ್ಲಿ ಮಾ.22ರಂದು ಡೆಯಲಿರುವ ರೈತರ ಬೃಹತ್ ಚಳವಳಿಗೆ ಬೆಂಬಲವಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಗುರುಪುರ ವಲಯ ಸಮಿತಿಯು ರವಿವಾರ ಗಂಜಿಮಠ ಗ್ರಾಪಂ ಸಭಾಭವನದಲ್ಲಿ ‘ಗುರುಪುರ ವಲಯ ರೈತ ಸಮಾವೇಶ’ ನಡೆಸಿತು.
ದ.ಕ. ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ವಾಸುದೇವ ಉಚ್ಚಿಲ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಬಳಿಕ ಭಾರತದಲ್ಲಿ ಇದೇ ಪ್ರಥಮ ಬಾರಿಗೆ 100 ದಿನ ಮೀರಿ ಚಳುವಳಿಯೊಂದು ನಡೆಯುತ್ತಿದೆ. ಕೇಂದ್ರ ಸರಕಾರ ತಿದ್ದುಪಡಿ ತಂದಿರುವ ಮೂರು ರೈತ ವಿರೋಧಿ ಮಸೂದೆ ರದ್ದುಪಡಿಸಲು ಆಗ್ರಹಿಸಿ ದಿಲ್ಲಿಯಲ್ಲಿ ಈಗಲೂ ಚಳವಳಿ ನಡೆಯುತ್ತಿದೆ. ಕಾರ್ಮಿಕರ ಮೂಲ ರೈತಾಪಿ ತಳಹದಿಯಲ್ಲಿದೆ. ಹಾಗಾಗಿ ರೈತರೊಂದಿಗೆ ಕಾರ್ಮಿಕ ಸಂಘಟನೆ ಇದೆ. ಕೇಂದ್ರ ಸರಕಾರವು ಬಡವರ ವಿರುದ್ಧ ದಮನಕಾರಿ ನೀತಿ ಜಾರಿಗೆ ತಂದು ‘ಆಪ್ತ ಬಂಡವಾಳಶಾಹಿ’ಗಳಿಗೆ ಉತ್ತೇಜನ ನೀಡುತ್ತಿದೆ ಎಂದು ವ್ಯಂಗ್ಯವಾಡಿದರು.
ಸಿಐಟಿಯು ಮುಖಂಡ ಯು.ಬಿ.ಲೋಕಯ್ಯ ಮಾತನಾಡಿ ಕೇಂದ್ರ ಸರಕಾರವು ಜನಸಾಮಾನ್ಯರ ‘ವೈರಿ ಮಸೂದೆ’ ತಂದಿದೆ. ಕೇಂದ್ರದ ಕುರುಡು ನೀತಿಯಿಂದ ಈ ದೇಶದ ಸಂಪತ್ತು ಅದಾನಿ-ಅಂಬಾನಿ ಮತ್ತು ಕಾರ್ಪೊರೆಟ್ ಜಗತ್ತಿಗೆ ಹಸ್ತಾಂತರಿಸಲು ಮೋದಿ ಉತ್ಸಾಹ ತೋರ್ಪಡಿಸುತ್ತಿದ್ದಾರೆ. ಇದು ‘ಆಳುವವರು ಆಳಬೇಕು, ಬೇಡುವವರು ಬೇಡುತ್ತಲೇ ಇರಬೇಕು’ ಎಂಬ ನೀತಿಯಂತಾಗಿದೆ. ಇದು ರೈತ ಮಿತ್ರ ಸರಕಾರವಲ್ಲ. ಇದು ಅಂಬಾನಿ-ಅದಾನಿ ಎದುರು ದೇಶದ ಬಡಜನತೆ ಗುಲಾಮರಾಗಬೇಕು ಎಂಬ ನೀತಿಯಾಗಿದೆ ಎಂದು ಟೀಕಿಸಿದರು.
ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಸದಾಶಿವ ದಾಸ್, ದ.ಕ. ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಐಟಿಯು ಗುರುಪುರ ವಲಯ ಸಮಿತಿ ಅಧ್ಯಕ್ಷ ಗಂಗಯ್ಯ ಅಮೀನ್, ಪ್ರಗತಿಪರ ಕೃಷಿಕ ಕಾರಮೊಗುರುಗುತ್ತು ಜಿ.ಕೆ.ಕಿಟ್ಟಣ್ಣ ರೈ ಮಾತನಾಡಿದರು.
ಗುರುಪುರ ವಲಯ ರೈತ ಸಂಘದ ಅಧ್ಯಕ್ಷ ಬಾಬು ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ನೋಣಯ್ಯ ಸ್ವಾಗತಿಸಿ, ವಂದಿಸಿದರು.