×
Ad

ಅಂಚೆ ಇಲಾಖೆಯ ಭವಿಷ್ಯದ ಬಗ್ಗೆ ಚಿಂತನೆ ಅಗತ್ಯ: ಬಿ.ಶಿವಕುಮಾರ್

Update: 2021-03-14 17:29 IST

ಉಡುಪಿ, ಮಾ.14: ಕೇಂದ್ರ ಸರಕಾರ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದು, ಇದರೊಂದಿಗೆ ಅಂಚೆ ಇಲಾಖೆ ಭವಿಷ್ಯ ಕೂಡ ತೂಗುಗತ್ತಿಯಲ್ಲಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಂಚೆ ಇಲಾಖೆಯನ್ನು ಉಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ ಎಂದು ಫೆಡರೇಶನ್ ಆಫ್ ನ್ಯಾಶನಲ್ ಪೋಸ್ಟಲ್ ಆರ್ಗನೈಸೇಶನ್ ನವದೆಹಲಿ ಇದರ ಮಹಾಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್ ಸಿ ನವದೆಹಲಿ ಇದರ ರಾಷ್ಟ್ರೀಯ ಅಧ್ಯಕ್ಷ ಬಿ.ಶಿವಕುಮಾರ್ ಹೇಳಿದ್ದಾರೆ.

ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್ ಸಿ, ಪೋಸ್ಟ್‌ಮೆನ್-ಎಂಟಿಎಸ್ ಮತ್ತು ಗ್ರಾಮೀಣ ಅಂಚೆ ಸೇವಕರ ಸಂಘ ಉಡುಪಿ ವಿಭಾಗೀಯ ಶಾಖೆಗಳ ಆಶ್ರಯದಲ್ಲಿ ರವಿವಾರ ಬನ್ನಂಜೆ ನಾರಾಯಣಗುರು ಮಂದಿರದ ಶಿವಗಿರಿ ಸಭಾಗೃಹದಲ್ಲಿ ಆಯೋಜಿಸಲಾದ 16ನೆ ಜಂಟಿ ದ್ವೈವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಏಳನೇ ವೇತನ ಆಯೋಗದ ಅನುಷ್ಠಾನದಿಂದ ಗ್ರೂಪ್ ಡಿ ನೌಕರರಿಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚಿಸಲು ಸಚಿವ ರಾಜನಾಥ್ ಸಿಂಗ್ ಕರೆದ ಸಭೆಯಲ್ಲಿ ಎನ್‌ಡಿಎ ಸರಕಾರದ ಬಗ್ಗೆ ನಮಗೆ ಯಾವುದೇ ನಂಬಿಕೆ ಇಲ್ಲ ಎಂಬು ದಾಗಿ ನೇರವಾಗಿ ಹೇಳಿದ್ದೇವೆ. ವಾಜಪೇಯಿ ಸರಕಾರದಲ್ಲೂ ನಮ್ಮ ಬೇಡಿಕೆ ಈಡೇರಿಸುವುದಾಗಿ ಹೇಳಿ ಭರವಸೆ ನೀಡಿದ ಸರಕಾರ ಈವರೆಗೆ ಒಂದೇ ಒಂದು ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಅವರು ದೂರಿದರು.

ಉಡುಪಿ ಅಂಚೆ ವಿಭಾಗ ಅಂಚೆ ಅಧೀಕ್ಷಕ ನವೀನ್ ಚಂದರ್, ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್ ಸಿ ಕರ್ನಾಟಕ ವಲಯ ಕಾರ್ಯದರ್ಶಿ ಎಸ್.ಖಂಡೋಜಿ ರಾವ್, ರಾಷ್ಟ್ರೀಯ, ಅಂಚೆ ನೌಕರರ ಸಂಘ ಪೋಸ್ಟ್‌ಮೆನ್ - ಎಂಟಿಎಸ್ ಕರ್ನಾಟಕ ವಲಯ ಕಾರ್ಯದರ್ಶಿ ಆರ್.ಮಹದೇವ, ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘ ಕೇಂದ್ರ ಸ್ಥಾನ ನವದೆಹಲಿ ಅಧ್ಯಕ್ಷ ಎಂ.ಪಿ.ಚಿತ್ರಸೇನ, ಎಫ್‌ಎನ್‌ಪಿಒ ನವದೆಹಲಿ ಸಹಾಯಕ ವಿತ್ತೀಯ ಕಾರ್ಯ ದರ್ಶಿ ಬಾಲಚಂದ್ರ ಕೆ.ಆರ್. ಮುಖ್ಯ ಅತಿಥಿಗಳಾಗಿದ್ದರು.

ವಿಶ್ರಾಂತ ಅಂಚೆ ಪಾಲಕ ಎನ್.ದಯಾನಂದ, ಸಂಘದ ಹಿರಿಯ ನೇತಾರ ಪಿ.ಎಸ್.ರಾಜಾರಾಮ್, ಅಂಚೆ ಅಧೀಕ್ಷಕ ಧನಂಜಯ ಆಚಾರ್, ಗಣೇಶ್ ಅರಸ್, ಕೃಷ್ಣಪ್ಪ ಕೆ., ಪೋಸ್ಟ್‌ಮೆನ್-ಎಂಟಿಎಸ್ ಅಧ್ಯಕ್ಷ ವಾಸುದೇವ ತೊಟ್ಟಂ, ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದ ಅಧ್ಯಕ್ಷ ಹಿರಿಯಣ್ಣ ಮಡಿವಾಳ ಉಪಸ್ಥಿತರಿದ್ದರು.

ಉಡುಪಿ ಡಿಟಿಸಿ ಪ್ರಶಿಕ್ಷಕ ಪ್ರವೀಣ್ ಜತ್ತನ್ ಸ್ವಾಗತಿಸಿದರು. ಗ್ರೂಪ್ ಸಿ ವಿಭಾಗೀಯ ಕಾರ್ಯದರ್ಶಿ ಸುರೇಶ್ ಕೆ. ಪ್ರಾಸ್ತಾವಿಕವಾಗಿ ವಾತನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News