ಉಜ್ವಲ ಭಾರತದ ಭವಿಷ್ಯಕ್ಕೆ ಮಕ್ಕಳ ಪಾತ್ರ ಬಹುಮುಖ್ಯ: ಕಾವೇರಿ
ಕುಂದಾಪುರ, ಮಾ.14: ಉಜ್ವಲ ಭಾರತದ ಭವಿಷ್ಯಕ್ಕೆ ಮಕ್ಕಳ ಪಾತ್ರ ಬಹು ಮುಖ್ಯ. ಬುಡಕಟ್ಟು ಜನಾಂಗದ ಮಕ್ಕಳಿಗೆ ಎಲ್ಲರಂತೆ ಹೆಚ್ಚು ವಿದ್ಯಾಭ್ಯಾಸ ನೀಡುವ ಮೂಲಕ ಅವರ ಹಕ್ಕು ಮತ್ತು ರಕ್ಷಣೆಗೆ ನಾವು ಪ್ರಾಮುಖ್ಯತೆ ವಹಿಸಬೇಕು ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕುಂಭಾಶಿ ಗ್ರಾಮ ಪಂಚಾಯತ್, ಕುಂಭಾಶಿ ಮಕ್ಕಳ ಮನೆ ಇವುಗಳ ಸಂಯುಕ್ತ ಆಶ್ರಯದಲ್ಲಿ 75ನೆ ಸ್ವಾತಂತ್ರೋತ್ಸವದ ಪ್ರಯುಕ್ತ ಬುಡಕಟ್ಟು ಜನಾಂಗದವರಿಗಾಗಿ ಕುಂಭಾಶಿ ಮಕ್ಕಳ ಮನೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕುಂಭಾಶಿ ಗ್ರಾಪಂ ಅಧ್ಯಕ್ಷೆ ಶ್ವೇತಾ ಎಸ್.ಆರ್. ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ಗ್ರಾಪಂ ಸದಸ್ಯೆ ರಾಜಶ್ರೀ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೋಭಾ ಶೆಟ್ಟಿ, ನಿವೃತ್ತ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಉಡುಪಿ ಮಹಿಳಾ ಠಾಣೆಯ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಪಂಚಾ ಯತ್ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಹಿರಿಯ ಲೆಕ್ಕ ಪರಿಶೋಧನಾ ಧಿಕಾರಿ ಶ್ರೀನಿವಾಸ್, ಬೆಂಗಳೂರು ಮಹಾಲೇಖಪಾಲಕರ ಕಚೇರಿಯ ಸಹಾಯಕ ಲೆಕ್ಕ ಪರಿಶೋಧನಾಧಿಕಾರಿ ಲಖನ್, ಮಕ್ಕಳ ಮನೆ ಸಂಚಾಲಕ ಗಣೇಶ್ ಕುಂಭಾಶಿ ಉಪಸ್ಥಿತರಿದ್ದರು.
ಗಣೇಶ್ ಬಾರಕೂರು ಸ್ವಾಗತಿಸಿದರು. ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಥಮ ದರ್ಜೆ ಸಹಾಯಕ ಅನಿಲ್ ವಂದಿಸಿದರು.