ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಮಂಗಳೂರು, ಮಾ.14: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಪಾಂಡೇಶ್ವರ ಸಂಚಾರ ಪಶ್ಚಿಮ ಠಾಣಾ ಎಎಸ್‌ಐ ನಾರಾಯಣ ನಾಯ್ಕ್ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ.
ಅಕ್ಟೋಬರ್ 10ರಂದು ಹೈವೇ ಪ್ಯಾಟ್ರೋಲಿಂಗ್ ವೇಳೆ ಮೇರಿಹಿಲ್ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ.
ಬಂಟ್ವಾಳದ ಕೇಪು ನೀರ್ಕಜೆಯ ಈಶ್ವರ ನಾಯ್ಕ ಮತ್ತು ದೇವಕಿ ದಂಪತಿಯ ಪುತ್ರನಾಗಿ ಜನಿಸಿದ ಇವರು 1989ರಲ್ಲಿ ಪೊಲೀಸ್ ಇಲಾಖೆಗೆ ಸಿಬ್ಬಂದಿಯಾಗಿ ಸೇರ್ಪಡೆಯಾದರು. ಚೆನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಪಣಂಬೂರು, ಬಜಪೆ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಮಂಗಳೂರಿನ ಸಿಎಆರ್ ಮೈದಾನದಲ್ಲಿ ಮೃತರ ಪಾರ್ಥೀವ ಶರೀರಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಅಂತಿಮ ನಮನ ಸಲ್ಲಿಸಿದ್ದು, ಬಳಿಕ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.