ಜೆರುಸಲೇಮ್‌ನಲ್ಲಿ ಝೆಕ್ ರಿಪಬ್ಲಿಕ್‌ನ ರಾಜತಾಂತ್ರಿಕ ಕಚೇರಿ: ಫೆಲೆಸ್ತೀನ್ ಪ್ರಾಧಿಕಾರ, ಅರಬ್ ಲೀಗ್ ಖಂಡನೆ

Update: 2021-03-14 18:31 GMT

ಜೆರುಸಲೇಮ್, ಮಾ. 14: ಝೆಕ್ ರಿಪಬ್ಲಿಕ್ ದೇಶವು ಜೆರುಸಲೇಮ್‌ನಲ್ಲಿ ತನ್ನ ಇಸ್ರೇಲ್ ರಾಜತಾಂತ್ರಿಕ ಕಚೇರಿಯನ್ನು ಸ್ಥಾಪಿಸಿರುವುದನ್ನು ಫೆಲೆಸ್ತೀನಿಯನ್ ಪ್ರಾಧಿಕಾರ ಮತ್ತು ಅರಬ್ ಲೀಗ್ ಖಂಡಿಸಿವೆ. ಇದು ಅಂತರ್‌ರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಅವು ಅಭಿಪ್ರಾಯಪಟ್ಟಿವೆ.

ಝೆಕ್ ರಿಪಬ್ಲಿಕ್ ಟೆಲ್ ಅವೀವ್‌ನಲ್ಲಿರುವ ತನ್ನ ಇಸ್ರೇಲ್ ರಾಯಭಾರ ಕಚೇರಿಯ ಜೆರುಸಲೇಮ್ ಶಾಖೆಯನ್ನು ಗುರುವಾರ ತೆರೆದಿತ್ತು.

‘ಲಸಿಕೆ ರಾಜತಾಂತ್ರಿಕತೆ’ ಕಾರ್ಯಕ್ರಮದಡಿಯಲ್ಲಿ ಇಸ್ರೇಲ್ 5,000 ಮೋಡರ್ನಾ ಕೋವಿಡ್-19 ಲಸಿಕಾ ಡೋಸ್‌ಗಳನ್ನು ಝೆಕ್ ರಿಪಬ್ಲಿಕ್‌ಗೆ ಕಳುಹಿಸಿದ ಎರಡು ವಾರಗಳ ಬಳಿಕ, ಝೆಕ್ ರಾಯಭಾರ ಕಚೇರಿಯ ಜೆರುಸಲೇಮ್ ಶಾಖೆ ಉದ್ಘಾಟನೆಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಝೆಕ್ ಪ್ರಧಾನಿ ಆ್ಯಂಡ್ರೇಜ್ ಬಬಿಸ್ ಪಾಲ್ಗೊಂಡಿದ್ದರು.

ಇಸ್ರೇಲ್ ಝೆಕ್ ರಿಪಬ್ಲಿಕ್‌ಗೆ ಕಳುಹಿಸಿರುವ 5,000 ಕೋವಿಡ್-19 ಲಸಿಕೆಯ ಡೋಸ್‌ಗಳು ಬಳಿಕ ಕಾನೂನು ಪರಿಶೀಲನೆಗೆ ಒಳಪಟ್ಟಿದ್ದು, ಅದನ್ನು ಸ್ಥಗಿತಗೊಳಿಸಲಾಗಿದೆ.

‘‘ಝೆಕ್ ರಿಪಬ್ಲಿಕ್‌ನ ಕ್ರಮವು ಫೆಲೆಸ್ತೀನ್ ಜನತೆ ಮತ್ತು ಅವರ ಹಕ್ಕುಗಳ ಮೇಲೆ ನಡೆದ ದಾಳಿಯಾಗಿದೆ ಹಾಗೂ ಅಂತರ್‌ರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ’’ ಎಂದು ಫೆಲೆಸ್ತೀನ್ ವಿದೇಶ ಸಚಿವಾಲಯ ಶನಿವಾರ ಹೇಳಿದೆ. ಇದು ಶಾಂತಿ ಪ್ರಕ್ರಿಯೆಗೆ ಹಾನಿ ಉಂಟು ಮಾಡುತ್ತದೆ ಎಂದು ಅದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News