ಮಂಗಳೂರಿನ ಹಳೆ ಡಿಸಿ ಕಚೇರಿಗೆ ಕಲ್ಚರಲ್ ಹಬ್ ಮೆರಗು
ಮಂಗಳೂರು: ನಗರದ ಹ್ಯಾಮಿಲ್ಟನ್ ಸರ್ಕಲ್ ಬಳಿಯ ಐತಿಹಾಸಿಕ ಹಿನ್ನೆಲೆಯಿರುವ ಹಳೆ ಡಿಸಿ ಕಚೇರಿಯ ಕಟ್ಟಡಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಂಸ್ಕೃತಿಕ ಕೇಂದ್ರದ (ಕಲ್ಚರಲ್ ಹಬ್) ಮೆರಗು ನೀಡಲು ಸಿದ್ಧತೆ ನಡೆದಿದೆ. ಸುಮಾರು 10 ಕೋ.ರೂ. ವೆಚ್ಚದಲ್ಲಿ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ.
ಹಳೆ ಡಿಸಿ ಕಚೇರಿಯು ಪಾರಂಪರಿಕ ಕಟ್ಟಡವಾಗಿ ಗುರುತಿ ಸಿಕೊಂಡಿವೆ. ಇದನ್ನು ಪಾಳು ಬಿಡುವ ಬದಲು ದುರಸ್ತಿಗೊಳಿಸುವ ಮೂಲಕ ಮೆರಗು ನೀಡಲು ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.ಅಂದರೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ವಿಸ್ತೃತ ವರದಿಯನ್ನು ತಯಾರಿಸಲಾಗಿದೆ. ಹಳೆ ಡಿಸಿ ಕಚೇರಿಯು ಎರಡು ಕಟ್ಟಡಗಳನ್ನು ಹೊಂದಿದೆ. ಒಂದು ಕಟ್ಟಡದಲ್ಲಿ ಚುನಾವಣಾ ಮತ ಎಣಿಕೆಯ ಬಳಿಕ ಇವಿಎಂ ಮೆಷಿನ್‌ಗಳನ್ನು ಸೂಕ್ತ ಭದ್ರತಾ ವ್ಯವಸ್ಥೆಯೊಂದಿಗೆ ಇಡಲಾಗಿದೆ. ಇನ್ನೊಂದು ಕಟ್ಟಡದಲ್ಲಿ ಜಿಲ್ಲಾಡಳಿತದ ಅಮೂಲ್ಯ ದಾಖಲೆಗಳನ್ನು ಸಂಗ್ರಹಿಸಡಲಾಗಿದೆ. ಹಾಗಾಗಿ ಇವಿಎಂ ಮೆಷಿನ್ ಮತ್ತು ದಾಖಲೆಪತ್ರಗಳನ್ನು ಸ್ಧಳಾಂತರ ಮಾಡದೆ ಇಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಈ ಸ್ಥಳಾಂತರದ ಪ್ರಕ್ರಿಯೆ ಮುಗಿದ ಬಳಿಕ ಹಳೆಯ ಡಿಸಿ ಕಚೇರಿಗೆ ಹೊಸ ಮೆರಗು ಸಿಗಲಿದೆ. ಆ ಬಳಿಕ ಹಳೆ ಡಿಸಿ ಕಚೇರಿ ಕಟ್ಟಡವು ಕಲ್ಚರಲ್ ಹಬ್ ಆಗಲಿವೆ.
ಸದ್ಯ ದ.ಕ.ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣವು 5.4 ಎಕರೆ ಪ್ರದೇಶವನ್ನು ಒಳಗೊಂಡಿದೆ. ಇದರಲ್ಲಿ ಹಳೆಯ ಕಟ್ಟಡ ಸಹಿತ ಶೇ.30ರಷ್ಟು ಪ್ರದೇಶ ಅಭಿವೃದ್ಧಿಯಾಗಲಿದೆ. ಇತಿಹಾಸಕ್ಕೆ ಸಾಕ್ಷಿಯಾಗಿರುವ ಹಳೆ ಡಿಸಿ ಕಚೇರಿಯ ಸಂರಕ್ಷಣೆಯ ಜೊತೆಗೆ ಮಂಗಳೂರಿನಲ್ಲಿ ಪ್ರವಾಸಿ ಆಕರ್ಷಣೆ ಹೆಚ್ಚಿಸುವ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಉದ್ದೇಶವನ್ನು ಸ್ಮಾರ್ಟ್ ಸಿಟಿ ಯೋಜನೆಯು ಹೊಂದಿವೆ. ಜಿಲ್ಲೆಯ ಪರಂಪರೆಗಳನ್ನು ಪ್ರವಾಸಿಗರು ಮತ್ತು ಯುವಜನರಿಗೆ ಪರಿಚಯಿಸುವ, ಮಾಹಿತಿ ನೀಡುವ, ಅಧ್ಯಯನ ನಡೆಸುವ ಕೇಂದ್ರವಾಗಿ ಇದು ರೂಪುಗೊಳ್ಳಲಿದೆ.
ಜಿಲ್ಲೆಯ ಚಾರಿತ್ರಿಕ ಹಿನ್ನೆಲೆ, ಅಪರೂಪದ ಕಲಾವಸ್ತುಗಳು, ಕಲಾಕೃತಿಗಳು, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಬಿಂಬಿಸುವ ವುಗಳ ರಕ್ಷಣೆ, ಅವುಗಳ ಪ್ರದರ್ಶನ ಮತ್ತು ಅದಕ್ಕೆ ಸಂಬಂಧಿಸಿ ದಂತೆ ಸಾರ್ವಜನಿಕ ಕಾರ್ಯಕ್ರಮಗಳು, ಪ್ರಕಟನೆಗಳು ಹಾಗೂ ಸಂಶೋಧನೆಗೆ ಒತ್ತು ನೀಡುವ ತಾಣವಾಗಿ ಹಳೆ ಡಿಸಿ ಕಚೇರಿಯು ರೂಪುಗೊಳ್ಳಲಿದೆ. ಮಂಗಳೂರಿನಲ್ಲಿ ಇಂತಹದ್ದೊಂದು ಸಾಂಸ್ಕೃತಿಕ ಕೇಂದ್ರ ಸದ್ಯ ಇಲ್ಲ. ಚಾರಿತ್ರಿಕ ಹಿನ್ನಲೆ, ಅತ್ಯುತ್ತಮ ವಾಸ್ತುಶಿಲ್ಪ, ವಿನ್ಯಾಸ ಹೊಂದಿರುವ ಹಳೆ ಡಿಸಿ ಕಚೇರಿಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪಾರಂಪಾರಿಕ ತಾಣವಾಗಿ ಗುರುತಿಸಿದೆ. ಆದರೆ ಈ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದೆ. ಇದಕ್ಕೆ ಕಾಯಕಲ್ಪ ನೀಡಿ ಸಂರಕ್ಷಿಸದಿದ್ದರೆ ಇದು ಕಣ್ಮರೆಯಾಗಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.
ಐತಿಹಾಸಿಕ ಸ್ಮಾರಕ
ಹಳೆ ಡಿಸಿ ಕಚೇರಿ ಕಟ್ಟಡವು ಕೇವಲ ಡಿಸಿ ಕಚೇರಿ ಆಗಿರಲಿಲ್ಲ. ಅದೊಂದು ಐತಿಹಾಸಿಕ ಸ್ಮಾರಕವೂ ಆಗಿದೆ. ಈ ಕಟ್ಟಡಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ.ವಿಜಯನಗರದ ಅರಸರ ಅಧೀನ ದಲ್ಲಿದ್ದ ಜೈನ ಅರಸು ಮನೆತನದ ಬಂಗರ ಕಾಲದಲ್ಲಿ ನಿರ್ಮಿಸಲಾದ ಅರಮನೆ ಪ್ರದೇಶ ಮುಂದೆ ಜಿಲ್ಲಾ ಕಲೆಕ್ಟರ್ ಕಚೇರಿಯಾಗಿ ಪರಿವರ್ತನೆಗೊಂಡಿತು. ಬ್ರಿಟಿಷರೊಂದಿಗೆ ಟಿಪ್ಪುಸುಲ್ತಾನ್ 1784ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಈ ಅರಮನೆ ಟಿಪ್ಪು ಸುಲ್ತಾನ್‌ನ ವಶಕ್ಕೆ ಬಂತು. ಟಿಪ್ಪು ಸುಲ್ತಾನ್‌ರ ಮರಣದ ಬಳಿಕ 1799ರಲ್ಲಿ ಮೇಜರ್ ಸರ್ ಥಾಮಸ್ ಮುನ್ರೊ ಪ್ರಥಮ ಜಿಲ್ಲಾ ಕಲೆಕ್ಟರ್ ಆಗಿ ಈ ಅರಮನೆಯಲ್ಲಿ ಕಲೆಕ್ಟರ್ ಕಚೇರಿ ಆರಂಭಿಸಿದರು.