ವಿಟ್ಲ: ಗ್ಯಾರೇಜ್ ನಲ್ಲಿ ಬೆಂಕಿ ಅವಘಡ; ಲಕ್ಷಾಂತರ ರೂ. ನಷ್ಟ
ವಿಟ್ಲ, ಮಾ.15: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಗ್ಯಾರೇಜ್ ವೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ವಿಟ್ಲ ನಗರ ಹೊರವಲಯದ ಚಂದಳಿಕೆ ಎಂಬಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಚಂದಳಿಕೆ ಹರೀಶ್ ಎಂಬವರಿಗೆ ಸೇರಿದ ಕಾರು ಗ್ಯಾರೇಜ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ತಕ್ಷಣ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದರೂ ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ಗ್ಯಾರೇಜ್ ಭಾಗಶಃ ಸುಟ್ಟು ಕರಕಲಾಗಿತ್ತು. ಗ್ಯಾರೇಜ್ ಒಳಗಡೆ ರಿಪೇರಿಗೆಂದು ಇರಿಸಲಾಗಿದ್ದ ಕೆಲವೊಂದು ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಗ್ಯಾರೇಜ್ ಒಳಗಡೆ 10ಕ್ಕಿಂತಲೂ ಅಧಿಕ ವಾಹನಗಳಿದ್ದವು. ಬೆಂಕಿ ಕಾಣಿಸಿಕೊಂಡ ಕೂಡಲೇ ಅವುಗಳನ್ನು ಸ್ಥಳೀಯರು ತೆರವುಗೊಳಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ.
ಬೆಂಕಿಯ ಕೆನ್ನಾಲಗೆ ಸುತ್ತಮುತ್ತಲಿನಲ್ಲಿ ಮನೆ, ಅಂಗಡಿಗಳಿಗೆ ವ್ಯಾಪಿಸದಂತೆ ಸಾರ್ವಜನಿಕರು ಪಿಕಪ್ ವಾಹನದ ಮೂಲಕ ನೀರು ಹಾಯಿಸಿದರು. ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು. ಆದರೆ ಅಷ್ಟರಲ್ಲಿ ಗ್ಯಾರೇಜ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಅವಘಡದಲ್ಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.