×
Ad

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ವಿಶ್ವ ಗ್ರಾಹಕ ದಿನಾಚರಣೆ

Update: 2021-03-15 12:34 IST

ಮಂಗಳೂರು, ಮಾ.15: ದ.ಕ. ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳು, ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ಪಾಹಕ ಮಾಹಿತಿ ಕೇಂದ್ರ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇಂದು ವಿಶ್ವ ಗ್ರಾಹಕ ದಿನಾಚರಣೆ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಸೆಂಟ್ ಮಹಿಳಾ ಕಾಲೇಜಿನ ಸಂಚಾಲಕ ಕೆ.ದೇವಾನಂದ ಪೈ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಹಕ ಎಚ್ಚರಿಕೆಯಿಂದ ಇದ್ದಾಗ ಮಾತ್ರವೇ ತನ್ನ ಹಕ್ಕುಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಜಾಗೃತಿ, ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಅತೀ ಅಗತ್ಯ ಎಂದರು.

ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಜೆ. ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಹಕ ಹಕ್ಕುಗಳ ಕುರಿತಂತೆ ಅರಿವು ಶೇ.10ರಷ್ಟು ಮಂದಿಗೆ ಮಾತ್ರ ಇರುವುದು. ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಹಲವಾರು ರೀತಿಯಲ್ಲಿ ಮಾಡಲಾಗುತ್ತಿದೆ ಎಂದರು.

ಗ್ರಾಹಕ ಹಕ್ಕುಗಳಿಗೆ ಸಂಬಂಧಿಸಿ ಯಾವುದೇ ಪ್ರಕರಣಗಳು 90 ದಿನಗಳಲ್ಲಿ ಬಗೆಹರಿಯಬೇಕು. ಆದರೆ ಹಲವಾರು ಕಾರಣಗಳಿಂದಾಗಿ 2 ವರ್ಷಗಳಿಗೂ ಅಧಿಕ ಕಾಲ ಮುಂದುವರಿಯುತ್ತದೆ. ಗ್ರಾಹಕರ ಹಕ್ಕುಗಳ ಕುರಿತಾದ ಕಾಯ್ದೆ ಅತ್ಯಂತ ಶಕ್ತಿಶಾಲಿಯಾಗಿದ್ದು, ಯಾವುದೇ ಒಂದು ವಸ್ತುವನ್ನು ಖರೀದಿಸುವಾಗ ಗ್ರಾಹಕರು ಆ ವಸ್ತುವಿನ ಗುಣಮಟ್ಟ, ಪ್ರಮಾಣದ ಕುರಿತಂತೆ ಜಾಗೃತಿಯನ್ನು ಹೊಂದಿರಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ರಮ್ಯಾ ಸಿ.ಆರ್. ವಹಿಸಿದ್ದರು.

ವೇದಿಕೆಯಲ್ಲಿ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಯು.ತಾರಾ ರಾವ್, ಕೆನರಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಹೇಮಲತಾ ವಿ. ಪೈ, ಎಸ್‌ಡಿಎಂ ಬಿಬಿಎಂ ಕಾಲೇಜಿನ ಪ್ರಾಂಶುಪಾಲೆ ಅರುಣಾ ಪಿ. ಕಾಮತ್ ಉಪಸ್ಥಿತರಿದ್ದರು.

ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ. ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ಹಾಗೂ ಬೆಸೆಂಟ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News