ಎಂಆರ್‌ಪಿಎಲ್ ವಿರುದ್ಧ ಜೋಕಟ್ಟೆ ಗ್ರಾಮಸ್ಥರ ಧರಣಿ
ಮಂಗಳೂರು, ಮಾ.15: 2017ರ ಸರಕಾರಿ ಆದೇಶದ ಪ್ರಕಾರ ಜೋಕಟ್ಟೆ, ಕಳವಾರು, ಕೆಂಜಾರು ಜನ ವಸತಿ ಭಾಗದಲ್ಲಿ ಕೋಕ್, ಸಲ್ಫರ್ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಸಿರು ವಲಯ ನಿರ್ಮಿಸಲು ಕಂಪೆನಿ ಹಿಂದೇಟು ಹಾಕುವುದನ್ನು ಖಂಡಿಸಿ ಮತ್ತು ಕಂಪೆನಿಯ ಮಾಲಿನ್ಯದಿಂದ ಗ್ರಾಮಸ್ಥರ ಆರೋಗ್ಯದ ಮೇಲಾಗಿರುವ ಪರಿಣಾಮವನ್ನು ತಿಳಿಯಲು ಅಧ್ಯಯನ ನಡೆಸುವಂತೆ ಒತ್ತಾಯಿಸಿ ‘ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ’ ನೇತೃತ್ವದಲ್ಲಿಂದು ಎಸ್ ಇ ಝೆಡ್ ಕಾರಿಡಾರ್ ರಸ್ತೆಯಲ್ಲಿರುವ ಎಂಆರ್‌ಪಿಎಲ್ ಪ್ರಧಾನ ದ್ವಾರದ ಮುಂಭಾಗದಲ್ಲಿ ಧರಣಿ ನಡೆಯಿತು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಆರ್ ಪಿ ಎಲ್ ಕೋಕ್ ಸಲ್ಫರ್ ಘಟಕದಿಂದ ಆಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಕಂಪೆನಿ, ಜಿಲ್ಲಾಡಳಿತ ಆಸಕ್ತಿ ತೋರಿಸುತ್ತಿಲ್ಲ. ಸ್ಥಳೀಯ ಗ್ರಾಮಸ್ಥರು ಏಳು ವರ್ಷಗಳಿಂದ ಸತತವಾಗಿ ಹೋರಾಟ ನಡೆಸುತ್ತಿದ್ದರು ಮಾಲಿನ್ಯ ಪರಿಹಾರಕ್ಕಾಗಿ ಸರಕಾರ ಹೊರಡಿಸಿದ ಆರು ಅಂಶದ ಪರಿಹಾರ ಕ್ರಮಗಳು ಜಾರಿಯಾಗುತ್ತಿಲ್ಲ. ಜನವಸತಿ, ಕಂಪೆನಿ ನಡುವೆ ನಿರ್ಮಾಣವಾಗಬೇಕಾದ 27 ಎಕರೆ ಹಸಿರು ವಲಯ ನಿರ್ಮಾಣದ ಆದೇಶ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಜಿಲ್ಲಾಡಳಿತವೂ ಕಂಪೆನಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಈಗ 220 ಉದ್ಯೋಗಗಳಿಗೆ ಎಮ್ ಆರ್ ಪಿ ಎಲ್ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು ಸ್ಥಳೀಯರಿಗೆ ಸಣ್ಣ ಆದ್ಯತೆಯನ್ನೂ ನೀಡುತ್ತಿಲ್ಲ. ಇದರಿಂದ ಚಿನ್ನದಂತಹ ಉದ್ಯೋಗಗಳು ಹೊರ ರಾಜ್ಯದವರಿಗೆ, ಕೆಮಿಕಲ್ ಮಾಲಿನ್ಯದಿಂದ ರೋಗರುಜಿನಗಳು ಮಾತ್ರ ಸ್ಥಳೀಯರಿಗೆ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಕ್ ಸಲ್ಫರ್ ಮಾಲಿನ್ಯದಿಂದ ಸುತ್ತಲ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಆರೋಗ್ಯದ ಸ್ಥಿತಿಗತಿಯ ಅಧ್ಯಯನಕ್ಕೆ ಸಮಿತಿಯೊಂದನ್ನು ನೇಮಿಸುವ ಅಗತ್ಯವಿದೆ ಎಂದರು.
ತಾಪಂ ಸದಸ್ಯ ಬಿ.ಎಸ್.ಬಶೀರ್, ತೋಕೂರು ಗ್ರಾಪಂ ಅಧ್ಯಕ್ಷ ಕೆವಿನ್ ಫೆರಾವೊ, ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ಉದ್ಯಮಿ ರಶೀದ್ ಕೊಪ್ಪ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಪಂಚಾಯತ್ ಸದಸ್ಯರಾದ ಅಬೂಬಕರ್ ಬಾವ, ನವಾಝ್ ಜೋಕಟ್ಟೆ, ಝುಬೇದಾ, ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರೆಸಿಲ್ಲಾ, ಮಾಜಿ ಉಪಾಧ್ಯಕ್ಷ ಶಂಸು ಇದ್ದಿನಬ್ಬ, ಹೋರಾಟ ಸಮಿತಿಯ ಮುಖಂಡರಾದ ಸಿಲ್ವಿಯಾ, ಸುರೇಂದ್ರ, ರಾಜು ಅರಿಕೆರೆ, ಶೇಖರ ಜೋಕಟ್ಟೆ, ಹಕೀಂ ಜೋಕಟ್ಟೆ, ಚೆರಿಯೋನು ಜೋಕಟ್ಟೆ ಮಂಜುನಾಥ್, ನಝೀರ್ ಜೋಕಟ್ಟೆ, ಆಮಿನಮ್ಮ, ಫಕ್ರುದ್ದೀನ್, ಅಲೆಕ್ಸ್ ಕಳವಾರು, ಐತಪ್ಪ ಪೂಜಾರಿ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.
ಅಜ್ಮಲ್ ಮೂಸಾ ಸ್ವಾಗತಿಸಿದರು. ಪಂಚಾಯತ್ ಸದಸ್ಯ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು.