ಉಳ್ಳಾಲ ಪೊಲೀಸರಿಂದ ದೌರ್ಜನ್ಯ; ಆರೋಪ: ಸಿಎಫ್ಐಯಿಂದ ಪ್ರತಿಭಟನೆ
ಮಂಗಳೂರು, ಮಾ.15: ಗಾಂಜಾ ವ್ಯಸನಿಗಳಿಂದ ಹಲ್ಲೆಗೊಳಗಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್ಐ) ಕಾರ್ಯಕರ್ತರನ್ನು ಉಳ್ಳಾಲ ಪೊಲೀಸರು ಠಾಣೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ಇದರ ವಿರುದ್ಧ ಸಿಎಫ್ಐ ಮಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.
ಸಿಎಫ್ಐ ರಾಜ್ಯ ಸಮಿತಿ ಸದಸ್ಯ ಸಾದಿಕ್ ಜಾರತ್ತಾರು ಮಾತನಾಡಿ, ವಿದ್ಯಾರ್ಥಿಗಳು ಶಾಲಾ-ಕಾಲೇಜಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಡ್ರಾಪೌಟ್ ಆಗುತ್ತಿದ್ದಾರೆ. ಇದನ್ನು ಮನಗಂಡ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ 'ಝೀರೋ ಡ್ರಾಪೌಟ್' ಅಭಿಯಾನ ಹಮ್ಮಿಕೊಂಡಿದೆ. ಈ ಪ್ರಯುಕ್ತ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಹಿಂದಿರುಗುತ್ತಿದ್ದ ವೇಳೆ ಗಾಂಜಾ ವ್ಯಸನಿಗಳು ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಉಳ್ಳಾಲ ಪೋಲಿಸರು ಹಲ್ಲೆಗೊಳಗಾದವರನ್ನೇ ಬಂಧಿಸಿ, ಠಾಣೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಸಕ್ರಿಯವಾಗಿದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಆದರೆ ನಿನ್ನೆಯ ಘಟನೆ ನ್ಯಾಯ ಒದಗಿಸಬೇಕಾದ ಪೊಲೀಸರು ಗಾಂಜಾ ಮಾಫಿಯದೊಂದಿಗೆ ಆಂತರಿಕವಾಗಿ ಶಾಲೀಲಾಗಿದ್ದಾರೆಯೇ ಎಂಬ ಶಂಕೆ ಸಾರ್ವಜನಿಕರಲ್ಲಿ ಸಂಶಯ ಮೂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಲ್ಲದೆ ಗಾಂಜಾ ವ್ಯಸನಿಗಳನ್ನು ಕೂಡಲೇ ಬಂಧಿಸಬೇಕು. ಕಾನೂನು ದುರ್ಬಳಕೆ ಮಾಡಿಕೊಂಡ ಪೊಲೀಸರನ್ನು ಕರ್ತವ್ಯದಿಂದ ವಜಾ ಮಾಡಬೇಕು ಎಂದವರು ಆಗ್ರಹಿಸಿದರು.
ದೌರ್ಜನ್ಯ ಎಸಗಿದ ಪೊಲೀಸರಿಗೆ ಕಾನೂನು ಹೋರಾಟದ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಸಿಎಫ್‌ಐ ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ ಹೇಳಿದರು.
ಸಿಎಫ್ಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಇಹ್ತಿಶಾಮ್ , ಕೋಶಾಧಿಕಾರಿ ಸುಲ್ತಾನ್ , ಕ್ಯಾಂಪಸ್ ಫ್ರಂಟ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಮಂಗಳೂರು, ಕಾರ್ಯದರ್ಶಿ ಅಶ್ರಫ್ ಜೋಕಟ್ಟೆ ಮೊದಲಾದವರು ಭಾಗವಹಿಸಿದ್ದರು.