ಉಡುಪಿ: ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಮುಷ್ಕರ
ಉಡುಪಿ, ಮಾ.15: ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀ ಕರಣಗೊಳಿಸುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆಯ ಕರೆಯಂತೆ ಉಡುಪಿ ಜಿಲ್ಲೆಯಲ್ಲ್ಲಿ ಸೋಮವಾರ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಮುಷ್ಕರ ನಡೆಸಿದರು. ಉಡುಪಿ ಕೆನರಾ ಬ್ಯಾಂಕ್ ಕೋರ್ಟ್ ರೋಡ್ ಶಾಖೆಯ ಆವರಣದಲ್ಲಿ ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಸಲಂಚಾಲಕ ಹೆರಾಲ್ಡ್ ಡಿಸೋಜ, ಸುಧಾರಣೆಯ ನೆಪದಲ್ಲಿ ಕೆಲವೊಂದು ಕ್ರಮಗಳನ್ನು ಕೇಂದ್ರ ಸರಕಾರದ ಮುಗಂಡಪತ್ರದಲ್ಲಿ ಘೋಷಿಸಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕವಾದ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಈ ತಪ್ಪು ನಿರ್ಣಯ ಖಂಡನೀಯ ಎಂದರು.
ಕೆನರಾ ಬ್ಯಾಂಕಿನ ಮರಿಯೊ ಮಥಾಯಿಸ್ ಮಾತನಾಡಿ, ಖಾಸಗೀಕರಣದ ಹಿಂದೆ ಬಡವರ ಹಣವನ್ನು ಕೊಳ್ಳೆ ಹೊಡೆಯುವ ಪಿತೂರಿ ಅಡಗಿದೆ. ಬ್ಯಾಂಕುಗಳು ನಮ್ಮ ದೇಶದ ಸೊತ್ತು. ದೇಶದ ಅಭಿವೃದ್ಧಿಗೆ ಈ ಬ್ಯಾಂಕುಗಳು ಸಾಕಷ್ಟು ಶ್ರಮ ವಹಿಸಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಸಭೆಯನ್ನುದ್ದೇಶಿಸಿ ಎಐಬಿಇಎ ಮುಖಂಡ ರಮೇಶ್, ಎಐಬಿಓಸಿ ಮುಖಂಡ ಅಶೋಕ್ ಕೋಟ್ಯಾನ್, ಎನ್‌ಸಿ ಬಿಇ ನಾಯಕಿ ಸುಪ್ರಿಯಾ, ಎಐಬಿಓಎ ಮುಖಂಡ ರವಿಶಂಕರ್, ಬಿಇಎಫ್‌ಐ ಮುಖಂಡ ರವೀಂದ್ರ, ಕೆನರಾ ಬ್ಯಾಂಕಿನ ಅವಿನಾಶ್ ಹೆಗ್ಡೆ, ಪ್ರೇಮನಾಥ್ ಪೂಜಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಗೇಶ್ ನಾಯಕ್, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, ಸಿಐ ಟಿಯು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಕೆನರಾ ಬ್ಯಾಂಕಿನ ವರದರಾಜ್, ಪ್ರವೀಣ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮನೋಜ್ ಕುಮಾರ್ ಕಲ್ಮಾಡಿ, ರಮೇಶ್, ಬ್ಯಾಂಕ್ ಆಫ್ ಬರೋಡಾದ ರಮೇಶ್, ಯೂಕೋ ಬ್ಯಾಂಕಿನ ಸೂರಜ್, ಕರ್ಣಾಟಕ ಬ್ಯಾಂಕಿನ ನಿತ್ಯಾನಂದ, ಸಂಘಟನೆ ಮುಖಂಡರಾದ ಜಯನ್ ಮಲ್ಪೆ, ಸುರೇಖಾ ಮೊದಲಾದವರು ಉಪಸ್ಥಿತರಿದ್ದರು.