×
Ad

ಸ್ವಾತಂತ್ರ್ಯದ ಅಮೃತ ಮಹೋತ್ಸವ: ದೇಶದ 75 ಜಿ.ಪಂ. ಪೈಕಿ ದ.ಕ. ಜಿ.ಪಂ.ಗೂ ಸ್ಥಾನ

Update: 2021-03-15 17:44 IST

ಮಂಗಳೂರು,ಮಾ. 15: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಉತ್ತಮ ಸಾಧನೆಗೈದ ದೇಶದ 75 ಜಿಪಂಗಳನ್ನು ಗುರುತಿಸಲಾಗಿದ್ದು, ಆ ಪೈಕಿ ಕೇಂದ್ರ ಸರಕಾರದ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಮತ್ತು ನರೇಗಾ ಯೋಜನೆಯಡಿ ಜನುಪಯೋಗಿ ಕೆಲಸ ಕಾರ್ಯ ಮಾಡಿ ಗಮನ ಸೆಳೆದಿರುವ ದ.ಕ. ಜಿಪಂ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇನ್ನುಳಿದಂತೆ ರಾಜ್ಯದ ದಾವಣಗೆರೆ, ಕೊಡಗು, ಮಂಡ್ಯ ಜಿಪಂ ಕೂಡ ಸಾಧನೆಯ ಪಟ್ಟಿಯಲ್ಲಿ ಸೇರಿವೆ.

ಸ್ವಾತಂತ್ರದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸಿ ಜಿಪಂಗಳನ್ನು ಆಯ್ಕೆ ಮಾಡಲಾಗಿದೆ. ಸ್ವಚ್ಛತೆ, ಅನುದಾನದ ಬಳಕೆ ಇತ್ಯಾದಿ ಅಂಶಗಳನ್ನು ಪರಿಗಣಿಸಲಾಗಿದೆ.

ಈಗಾಗಲೇ ದ.ಕ.ಜಿಲ್ಲೆಯು ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಲ್ಪಟ್ಟಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆಗೈದಿದೆ. ಮಹಾತ್ಮಾಗಾಂಧಿ ಉದ್ಯೋಗ ಖಾತರಿ(ನರೇಗಾ) ಯೋಜನೆಯಡಿ ಉತ್ತಮ ಸಾಧನೆ ದಾಖಲಿಸಿದೆ. ಅಂಗನವಾಡಿ ಕೇಂದ್ರದ ಸುತ್ತಮುತ್ತ ಹಣ್ಣಿನ ಗಿಡಗಳನ್ನು ಬೆಳೆಸುವುದು, ಶಾಲಾ ಆವರಣ ಗೋಡೆಗಳನ್ನು ನಿರ್ಮಿಸುವುದು, ಬಚ್ಚಲು ಗುಂಡಿಗಳ ನಿರ್ಮಾಣ ಇತ್ಯಾದಿ ಕೆಲಸ ಕಾರ್ಯಗಳ ಮೂಲಕ ದ.ಕ.ಜಿಪಂ ಇತರ ಜಿಪಂಗಳಿಗೆ ಮಾದರಿಯಾಗಿದೆ. ಘನ ದ್ರವ ತ್ಯಾಜ್ಯ ಘಟಕಗಳ ನಿರ್ಮಾಣದಲ್ಲಿಯೂ ದ.ಕ.ಜಿಲ್ಲೆ ಮುಂಚೂಣಿಯಲ್ಲಿದೆ.

‘ಇಂತದ್ದೇ ಅಂಶವನ್ನು ಪರಿಗಣಿಸಿ ದ.ಕ.ಜಿಪಂನ್ನು ಆಯ್ಕೆ ಮಾಡಿಲ್ಲ. ಸ್ವಚ್ಛತೆ, ಅನುದಾನಗಳ ಬಳಕೆ ಸಹಿತ ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ’ ಎಂದು ದ.ಕ.ಜಿಪಂ ಸಿಇಒ ಕುಮಾರ್ ತಿಳಿಸಿದ್ದಾರೆ.

ಆಡಳಿತ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯ ಜನರ ಸಹಭಾಗಿತ್ವ ಮಹತ್ವದ್ದಾಗಿತ್ತು. ಸರಕಾರದ ಯೋಜನೆಗಳ ಯಶಸ್ವಿಯಲ್ಲಿ ಜಿಲ್ಲೆಯ ಜನರು ಪ್ರಮುಖ ಪಾತ್ರ ವಹಿಸಿದ್ದಾರೆ. ಯೋಜನೆಗಳನ್ನು ರೂಪಿಸುವುದು, ಅನುಷ್ಠಾನಗೊಳಿಸುವುದು, ಅನುದಾನ ಕ್ರೋಢೀಕರಿಸುವುದು ಇತ್ಯಾದಿಯಲ್ಲಿ ದ.ಕ.ಜಿಲ್ಲೆ ಮುಂಚೂಣಿಯಲ್ಲಿತ್ತು ಎಂದು ನಿಕಟಪೂರ್ವ ದ.ಕ.ಜಿಪಂ ಸಿಇಒ ಡಾ. ಸೆಲ್ವಮಣಿ ಪ್ರತಿಕ್ರಿಯಿಸಿದ್ದಾರೆ.

ನಮಗೆ ದೊರೆತ ಅನುದಾನವನ್ನು ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ವಿನಿಯೋಗಿಸಿದ್ದೇವೆ. ಅನುದಾನ ವಾಪಸ್ ಹೋಗಲು ನಾವು ಅವಕಾಶವನ್ನೇ ನೀಡಲಿಲ್ಲ. ಸರ್ವ ಸದಸ್ಯರ ಸಹಕಾರದಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News