ಆರ್‌ಟಿಐ ಕಾರ್ಯಕರ್ತ ಶಂಕರ ಶಾಂತಿ ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪತ್ನಿ ಮಕ್ಕಳಿಂದ ಉಪವಾಸ ಸತ್ಯಾಗ್ರಹ
ಉಡುಪಿ, ಮಾ.15: ಶಂಕರ ಶಾಂತಿ ಮೇಲೆ ಹಲ್ಲೆ ನಡೆದು ಇಂದಿಗೆ 23 ದಿನಗಳಾಗಿವೆ. ಆದರೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಇನ್ನು ಬಂಧಿಸಿಲ್ಲ. ಇದಕ್ಕೆ ರಾಜಕೀಯ ಒತ್ತಡವೇ ಕಾರಣ. ಈ ಘಟನೆ ಬಗ್ಗೆ ಮೌನ ವಹಿಸಿರುವ ಜನಪ್ರತಿನಿಧಿಗಳು, ಆರೋಪಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಆರೋಪಿಸಿದ್ದಾರೆ.
ಬಾರಕೂರಿನ ಆರ್‌ಟಿಐ ಕಾರ್ಯಕರ್ತ ಶಂಕರ ಶಾಂತಿ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಶಂಕರ ಶಾಂತಿ ಪತ್ನಿ ಪೂರ್ಣಿಮಾ ಮತ್ತು ಮಕ್ಕಳಿಂದ ಉಪವಾಸ ಸತ್ಯಾಗ್ರಹ ಹಾಗೂ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಮಾನ ಮನಸ್ಕರು ಮತ್ತು ಹಲವು ಸಂಘ ಸಂಸ್ಥೆಗಳ ಬೆಂಬಲ ದೊಂದಿಗೆ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಹಲ್ಲೆಗೆ ಸಂಬಂಧಿಸಿ ಎಲ್ಲ ರೀತಿಯ ಸಾಕ್ಷ್ಯಗಳಿವೆ. ಶಂಕರ ಶಾಂತಿಗೆ ಆಗಿರುವ ಅನ್ಯಾಯದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಆದುದರಿಂದ ನೈಜ್ಯ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಈಗಾಗಲೇ ಬಂಧನಕ್ಕೆ ಒಳಗಾಗಿ ಸುಳ್ಳುಪ್ರಮಾಣ ಪತ್ರ ತೋರಿಸಿ ಆಸ್ಪತ್ರೆಯಲ್ಲಿರುವ ಆರೋಪಿಯನ್ನು ಜೈಲಿಗೆ ಕಳುಹಿಸಬೇಕು. ಎಫ್‌ಐಆರ್‌ನಲ್ಲಿ ಕಠಿಣ ಸೆಕ್ಷನ್‌ಗಳನ್ನು ಹಾಕಬೇಕು ಎಂದು ಒತ್ತಾಯಿಸಿದರು.
ಉಡುಪಿ ಜಿಲ್ಲಾ ಸಾಮಾಜಿಕ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಅಧ್ಯಕ್ಷ ಸದಾಶಿವ ಶೆಟ್ಟಿ, ಬಿಲ್ಲವ ಮುಖಂಡ ಸುಧಾಕರ್ ಡಿ.ಅಮೀನ್, ದಸಂಸ ಭೀಮವಾದ ಮುಖಂಡ ಶೇಖರ ಹಾವಂಜೆ, ಪ್ರಮೋದ್ ಉಚ್ಚಿಲ್, ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಮಾತನಾಡಿದರು.
ಬಿಲ್ಲವ ಯುವ ವೇದಿಕೆ ಗೌರವಾಧ್ಯಕ್ಷ ದಿವಾಕರ್ ಸನಿಲ್, ಯುವ ವಾಹಿನಿ ಉಡುಪಿ ಘಟಕದ ಅಧ್ಯಕ್ಷ ಜಗದೀಶ್ ಕುಮಾರ್, ಬಿಲ್ಲವ ಮುಖಂಡರಾದ ಬಾರಕೂರು ಸತೀಶ್ ಪೂಜಾರಿ, ವೈ.ಸುಧೀರ್ ಕುಮಾರ್, ಸದಾನಂದ ಅಮೀನ್, ಸಾವಿತ್ರಿ ಗಣೇಶ್, ಬೇಬಿ ಪೂಜಾರ್ತಿ, ಜ್ಯೋತಿ ಪೂಜಾರ್ತಿ, ಶಂಕರ ಶಾಂತಿ ತಾಯಿ ಬಾಬಿ ಪೂಜಾರ್ತಿ ಮೊದಲಾದವರು ಉಪಸ್ಥಿತರಿದ್ದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.
ಸಿಎಂ ಮನೆ ಮುಂದೆ ಧರಣಿ ಎಚ್ಚರಿಕೆ:
ಆರ್‌ಟಿಐ ಕಾರ್ಯಕರ್ತನ ಮೇಲಿನ ಹಲ್ಲೆಯ ನಿಜವಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ನಡೆಸಲಾಗುವುದು ಎಂದು ದಸಂಸ ಭೀಮವಾದ ಮುಖಂಡ ಶೇಖರ ಹಾವಂಜೆ ಎಚ್ಚರಿಕೆ ನೀಡಿದರು. ಈ ಪ್ರಕರಣದಲ್ಲಿ ಪೊಲೀಸರಿಗೆ ರಾಜಕೀಯ ಒತ್ತಡ ಹೇರಿ ದಾರಿ ತಪ್ಪಿಸುವ ಕಾರ್ಯ ಮಾಡಲಾಗುತ್ತಿದೆ. ಆರೋಪಿಗಳಿಗೆ ರಾಜಕಾರಣಿಗಳು ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಅವರು ದೂರಿದರು.